ಕೋಲ್ಕತ್ತ: ಇಲ್ಲಿನ ಈಡೆನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಸಾಧನೆ ಸರಿಗಟ್ಟಿದರು.
ಇಂದು ಭಾನುವಾರ ವಿಶ್ವಕಪ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಕ್ರೀಸಿಗೆ ಬಂದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ೧೧೯ ಎಸೆತಗಳಲ್ಲಿ ೧೦ ಬೌಂಡರಿ ಸಹಿತ ೧೦೦ ರನ್ ಪೇರಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ೪೯ ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ ಅತೀ ಹೆಚ್ಚು ಶತಕದ ದಾಖಲೆ ಸರಿಗಟ್ಟಿದರು.
ನ.೫ ತಮ್ಮ ೩೫ ನೇ ಹುಟ್ಟುಹಬ್ಬ ಆಚರಿಸಿಕೊಂಡ ಕೊಹ್ಲಿ ಟೂರ್ನಿಯುದ್ದಕ್ಕೂ ಶತಕದ ಅಂಚಿನಲ್ಲಿ ಎಡವಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದ್ದರು. ಆದರೆ ಈ ಪಂದ್ಯದಲ್ಲಿ ರಕ್ಷಣಾತ್ಮಕ ಆಟದ ಮೂಲಕ ವಿರಾಟ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಮನಸ್ಸಿಲ್ಲಿ ಅವಿಸ್ಮರಣೀಯಗೊಳಿಸಿದರು. ತಂಡದ ರನ್ ಗಳಿಕೆ ನಿಧಾನವಾದಾಗ ಒಂದೇ ಒಂದು ಸಿಕ್ಸರ್ ಬಾರಿಸದ ಕೊಹ್ಲಿ ಜವಾಬ್ದಾರಿಯುತ ಆಟವಾಡಿದರು.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಭಾರತದ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್, ಒಟ್ಟು ೪೫೨ ಪಂದ್ಯಗಳಲ್ಲಿ ೪೯ ಶತಕದೊಂದಿಗೆ ಅತೀ ಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗರಾಗಿದ್ದಾರೆ. ಪ್ರಸ್ತುತ ಈ ದಾಖಲೆ ಸರಿಗಟ್ಟಿದ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ೨೮೮ ಪಂದ್ಯಗಳಲ್ಲಿ ೪೯ ಏಕದಿನ ಶತಕ ಬಾರಿಸಿ ತಮ್ಮ, ಒಟ್ಟಾರೆ ಅಂತರಾಷ್ಟ್ರೀಯ ಶತಕ ವನ್ನು ೭೯ ಕ್ಕೆ ಏರಿಸಿದ್ದಾರೆ.
೨೦೨೩ರ ಏಕದಿನ ವಿಶ್ವಕಪ್ ತಮ್ಮ ಎರಡನೇ ಶತಕ ದಾಖಲಿಸಿದ ಕೊಹ್ಲಿ ೮ ಪಂದ್ಯಗಳಿಂದ ೫೪೨ ರನ್ ಬಾರಿಸಿ ವಿಶ್ವಕಪ್ ೨೦೨೩ ಅಧಿಕ ರನ್ ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
