Monday, April 21, 2025
Google search engine

Homeಅಪರಾಧಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಚಾಲಕ ಕಿರಣ್ ಪೊಲೀಸ್ ವಶಕ್ಕೆ

ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಚಾಲಕ ಕಿರಣ್ ಪೊಲೀಸ್ ವಶಕ್ಕೆ

ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ.ಎಸ್.(೪೫) ಹತ್ಯೆ ಪ್ರಕರಣಕ್ಕೆ ಸಂಬಂಧ ಓರ್ವ ವ್ಯಕ್ತಿಯನ್ನು ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತ ಸದ್ಯ ಪೊಲೀಸ್ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.

ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಪ್ರತಿಮಾ ಅವರ ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದರು. ಕಿರಣ್ ತಂದೆ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆರೋಪಿ ಕಿರಣ್ ಹಾಗೂ ಪ್ರತಿಮಾ ನಡುವೆ ಇತ್ತೀಚೆಗೆ ಕೆಲ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವುಂಟಾಗಿತ್ತು. ಹೀಗಾಗಿ ಕೆಲ ದಿನಗಳ ಹಿಂದಷ್ಟೇ ಕಿರಣ್ ನನ್ನ ಚಾಲಕನ ಕೆಲಸದಿಂದ ಪ್ರತಿಮಾ ತೆಗೆದು ಹಾಕಿದ್ದರು. ಮರಳಿ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಶನಿವಾರ ರಾತ್ರಿ ಪ್ರತಿಮಾ ಮನೆಗೆ ಕಿರಣ್ ಬಂದಿದ್ದ ಎಂದು ತಿಳಿದುಬಂದಿದೆ.

ಈ ಅನುಮಾನದ ಮೇರೆಗೆ ಚಾಮರಾಜನಗರ ಬಳಿ ತೆರಳುತ್ತಿದ್ದ ಕಿರಣ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು. ಸದ್ಯ ಆರೋಪಿಯ ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಿರಣ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದ್ರೆ ಕಿರಣ್ ಒಬ್ಬನೇ ಆರೋಪಿ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.

ಮನೆಗೆ ನುಗ್ಗಿ ಚಾಕು ಇರಿದು ಹತ್ಯೆಗೈದಿರುವ ಘಟನೆ ಶನಿವಾರ ರಾತ್ರಿ ೮:೩೦ರ ಸುಮಾರಿಗೆ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್ಮೆಂಟಿನಲ್ಲಿ ನಡೆದಿತ್ತು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಡ್ಕಿ ಮೂಲದ ಪ್ರತಿಮಾ ಅವರಿಗೆ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದರು. ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲೇ ವಾಸವಿದ್ದರು. ಶನಿವಾರ ರಾತ್ರಿ ೮ ಗಂಟೆಗೆ ಕಚೇರಿಯಿಂದ ಕಾರಿನಲ್ಲಿ ಪ್ರತಿಮಾ ಮನೆಗೆ ಆಗಮಿಸಿದ್ದರು. ಕಾರು ಚಾಲಕ ಡ್ರಾಪ್ ಮಾಡಿ ಮನೆಗೆ ತೆರಳಿದ್ದರು. ನಂತರ ಮನೆಗೆ ನುಗ್ಗಿ ಚಾಕು ಇರಿದು ಕೊಲೆ ಮಾಡಲಾಗಿತ್ತು.

ಪ್ರತಿಮಾ ಸಹೋದರ ರಾತ್ರಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡು ಅಪಾರ್ಟ್ಮೆಂಟ್‌ನ ಕೆಳಗಿನ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದರು. ಆಗ ಕೆಳಗಿನ ಮನೆಯವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಏನೂ ಕಳ್ಳತನವಾಗಿಲ್ಲ. ಮನೆಗೆ ನುಗ್ಗಿ ಹತ್ಯೆಗೈದಿರುವುದರಿಂದ ಇದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯಿಂದ ಕೊಲೆಯ ಹಿಂದಿನ ನಿಜವಾದ ಕಾರಣ ತಿಳಿದುಬರಲಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.

RELATED ARTICLES
- Advertisment -
Google search engine

Most Popular