ಮಂಗಳೂರು(ದಕ್ಷಿಣ ಕನ್ನಡ): ದ.ಕ.ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಆರಂಭಿಸಲು ಸರ್ಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಶಾಸಕ ವೇದವ್ಯಾಸ ಕಾಮತ್ ರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತೀಕ್ಷ್ಣ ಎದಿರೇಟು ನೀಡಿದ್ದಾರೆ.
ಎಕ್ಸ್ ಹಾಗೂ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು, ಮಾನ್ಯ ಶಾಸಕರಾದ ವೇದವ್ಯಾಸ್ ಕಾಮತ್ ಅವರೇ, ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿರುವುದಲ್ಲ.

ಕಳೆದ 4 ವರ್ಷಗಳಿಂದ ನಿಮ್ಮದೇ ʻಡಬಲ್ ಇಂಜಿನ್ʼ ಸರ್ಕಾರವಿತ್ತು. ಶಾಸಕರು, ಸಚಿವರು, ಸಂಸದರು ಬಿಜೆಪಿಯವರೇ ಆಗಿದ್ದರು. ನಿಮ್ಮ ಅವಧಿಯಲ್ಲೇ ನಿಮಗೆ ಮರಳು ಗಣಿಗಾರಿಕೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಜನರ ಮುಂದೆ ನೂರು ಬಾರಿ ಸುಳ್ಳು ಹೇಳಿ, ಅದೇ ಸತ್ಯ ಎಂಬಂತೆ ಬಿಂಬಿಸುವ ಚಾಳಿ ನಿಮ್ಮದು. ಅಧಿಕಾರ ಸಿಕ್ಕಾಗ ದೋಚಿದ್ದು ಬಿಟ್ಟರೆ ದೂರದೃಷ್ಠಿಯ ಒಂದೂ ಕೆಲಸ ಮಾಡಿಲ್ಲ. ಈಗ ದಿಢೀರನೇ ಗಾಢ ನಿದ್ದೆಯಿಂದ ಎಚ್ಚೆತ್ತು, ಕಾಂಗ್ರೆಸ್ ದೂರುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಿಮ್ಮದೇ ಸರ್ಕಾರದ ಅವಧಿಯಲ್ಲಿ ರಾಜ್ಯದ ತಾಲೂಕು ಆಸ್ಪತ್ರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು.
ಆದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕರಾಕ್ಕೇರಿದ ಬಳಿಕ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಹೊಸ ಡಯಾಲಿಸಿಸ್ ಯಂತ್ರಗಳ ಪೂರೈಕೆ ಮತ್ತು ನಿರ್ವಹಣೆಗಾಗಿ ಹೊಸ ಟೆಂಡರ್ ಕರೆಯಲಾಗಿದೆ.

ನಿಮ್ಮ ರಾಜಕೀಯ ಸೇಡಿನ ಆರೋಪದ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದಿದ್ದಾರೆ.