ಕೊಚ್ಚಿ : ಕಲಮಸ್ಸೆರಿಯ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ನಡೆದ ಸ್ಫೋಟದ ಆರೋಪಿ ಡೊಮಿನಿಕ್ ಮಾರ್ಟಿನ್‌ಗೆ ನ್ಯಾಯಾಲಯವು ೧೦ ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.
ಸ್ಫೋಟದಲ್ಲಿ ೪ ಜನರು ಸಾವನ್ನಪ್ಪಿ ೫೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದಾದ ಕೆಲವು ಗಂಟೆಗಳ ನಂತರ ತಾನು ಯೆಹೋವನ ಸಾಕ್ಷಿಗಳ ಸಂಘದ ಮಾಜಿ ಸದಸ್ಯ ಎಂದು ಹೇಳಿಕೊಂಡ ಮಾರ್ಟಿನ್ ಸಿದ್ದಾಂತದ ವ್ಯತ್ಯಾಸಗಳ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದ.
ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್, ಮಾರ್ಟಿನ್‌ಗೆ ಪೊಲೀಸರ ಮನವಿಯಂತೆ ೧೦ ದಿನಗಳ ಪೊಲೀಸ್ ಕಸ್ಟಡಿ ನೀಡಿದ್ದಾರೆ. ಮಾರ್ಟಿನ್‌ಗೆ ಇರುವ ಆದಾಯದ ಮೂಲಗಳು, ಅಂತರಾಷ್ಟ್ರೀಯ ಸಂಪರ್ಕಗಳು ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ. ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಆರೋಪಿಯನ್ನು ಕೆಲವು ಸ್ಥಳಗಳಿಗೆ ಕರೆದೊಯ್ಯಬೇಕಿದೆ ಎಂದು ಪೊಲೀಸರು ಕೋರ್ಟ್‌ಗೆ ಮನವಿಯನ್ನು ಸಲ್ಲಿಸಿದ್ದರು.