ಬೆಳಗಾವಿ: ಕೆವೈಸಿ, ತಾಂತ್ರಿಕ ತೊಂದರೆಯಿಂದಾಗಿ ಗೃಹಲಕ್ಷ್ಮೀ ಯೋಜನೆ ಹಣ ಜಮೆ ವಿಳಂಬವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎರಡು ತಿಂಗಳದ್ದು ಎಲ್ಲರಿಗೂ ಹಣ ಬಂದಿದೆ. ಈ ತಿಂಗಳದ್ದು ಸುಮಾರು 1 ಕೋಟಿ 10 ಲಕ್ಷ ಜನರಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿದೆ. ಕೆವೈಸಿ ತೊಂದರೆ, ತಾಂತ್ರಿಕ ತೊಂದರೆ ಆಗಿದ್ದರಿಂದ ಹಣ ವರ್ಗಾವಣೆಗೆ ತೊಂದರೆ ಆಗಿದೆ. ಸರ್ಕಾರದಿಂದ ಹಣ ಬರುವುದು ಕೂಡ ತಡವಾಗುತ್ತಿದೆ. ತಡವಾದರೂ ಒಮ್ಮೆಯೇ ನಾಲ್ಕು ಸಾವಿರ ಹಣ ಜಮಾ ಆಗುತ್ತದೆ. ಅಗಸ್ಟ್ 30ರ ನಂತರ ನೋಂದಣಿ ಮಾಡಿಸಿದವರಿಗೆ ಒಂದು ಕಂತಿನ ಹಣ ಬಂದಿದೆ ಎಂದು ತಿಳಿಸಿದರು.
ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗುತ್ತಿದೆ. ಈವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ 30 ನೇ ತಾರೀಖು ಬರುತ್ತೆ, 20ಕ್ಕೆ ಬರುತ್ತೆ ಎನ್ನುವ ಗೊಂದಲ ಜನರಲ್ಲಿ ಇತ್ತು. ಈಗ ಒಂದು ದಿನಾಂಕ ಗೊತ್ತಾಗುವುದರಿಂದ ಬ್ಯಾಂಕ್ ಗೆ ಅಲೆಯುವ ಸ್ಥಿತಿ ತಪ್ಪಲಿದೆ. ಎಲ್ಲರಿಗೂ ಹಣ ಸಿಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.