ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 4 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಸ್ಥಳ ಮಹಜರು ನಡೆಸಿದರು.
ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿಗಳಾದ ಮನೀಶ್ ಮತ್ತು ಚೇತನ್ ಕೊಲೆ ನಡೆಸಿದ ಸ್ಥಳದಿಂದ ನೇರವಾಗಿ ಪುತ್ತೂರು ನಗರ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದರು. ಉಳಿದ ಇಬ್ಬರು ಆರೋಪಿಗಳಾದ ಕೇಶವ ಪಡೀಲು ಮತ್ತು ಮಂಜುನಾಥ ಯಾನೆ ಮಂಜು ಎಂಬವರನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕೊಲೆ ನಡೆಸಲಾದ ಸ್ಥಳಕ್ಕೆ ಕರೆತಂದು ಪೊಲೀಸರು ಮಂಗಳವಾರ ಸಂಜೆ ಸ್ಥಳದ ಮಹಜರು ನಡೆಸಿದರು.
ಕ್ಷುಲ್ಲಕ ಕಾರಣಕ್ಕಾಗಿ ಅಕ್ಷಯ್ ಕಲ್ಲೇಗ ಅವರನ್ನು ತಂಡವೊಂದು ಅಟ್ಟಾಡಿಸಿ ತಲವಾರಿನಿಂದ ಕಡಿದು ಕೊಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಕಬಕ ಗ್ರಾಮದ ನೆಹರೂನಗರ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿತ್ತು.
ಪುತ್ತೂರಿನ ನೆಹರುನಗರದಲ್ಲಿ ಸೋಮವಾರ ರಾತ್ರಿ ನಡೆದ ಅಪಘಾತಕ್ಕೆ ಸಂಬಂಧಿಸಿ ಅಕ್ಷಯ್ ಕಲ್ಲೇಗ ಹಾಗೂ ಆರೋಪಿಗಳ ಪೈಕಿ ಮನೀಶ್ ಮತ್ತು ಚೇತನ್ ನಡುವೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಯ ಬಳಿಕ ಅಕ್ಷಯ್ ಕಲ್ಲೇಗ ತನ್ನ ಸ್ನೇಹಿತ ಚಿಕ್ಕಮುಡ್ನೂರಿನ ವಿಖ್ಯಾತ್ ಎಂಬವರ ಜತೆ ನೆಹರೂನಗರದ ಕೆನರಾ ಬ್ಯಾಂಕ್ ಎಟಿಎಂ ಬಳಿ ನಿಂತುಕೊಂಡಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಆರೋಪಿಗಳಾದ ಮನೀಶ್, ಚೇತನ್, ಮಂಜುನಾಥ ಮತ್ತು ಕೇಶವ ಪಡೀಲು ಅವರು ಅಕ್ಷಯ್ ಕಲ್ಲೇಗ ಜೊತೆಗೆ ನಡೆದಿದ್ದ ಮಾತಿನ ಚಕಮಕಿಗೆ ಸಂಬಂಧಿಸಿ ತಕರಾರು ಎತ್ತಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು.