ತುಮಕೂರು: ಚಿರತೆ ದಾಳಿಗೆ ಸಿಲುಕಿದ ಮಗಳನ್ನು ತಂದೆ ರಕ್ಷಿಸಿರುವ ಘಟನೆ ತುಮಕೂರು ತಾಲೂಕಿನ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಲೇಖನ (೭) ಚಿರತೆ ದಾಳಿಯಿಂದ ಪಾರಾದ ಬಾಲಕಿ. ಬಾಲಕಿ ಮೇಲೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸುತ್ತಿದ್ದಂತೆ, ತಂದೆ ರಾಕೇಶ್ ಬೆದರಿಸಿ ಓಡಿಸಿದ್ದಾರೆ.
ನಿನ್ನೆ ಸಂಜೆ ರಾಕೇಶ್ ಮತ್ತು ಹರ್ಷಿತಾ ದಂಪತಿಯ ಮಗಳು ಲೇಖನ ಮನೆ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಚಿರತೆ ದಿಢೀರ್ ಮೈಮೇಲೆರಗಿದೆ. ಸ್ಥಳದಲ್ಲೇ ಇದ್ದ ರಾಕೇಶ್ ಜೋರಾಗಿ ಕೂಗಿದ್ದು, ದೊಣ್ಣೆಯಿಂದ ಬೆದರಿಸಿದ್ದಾರೆ. ಆಗ ಚಿರತೆ ಮಗುವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದೆ.
ಬಾಲಕಿಯ ಕಾಲಿಗೆ ಪರಚಿದ ಗಾಯಗಳಾಗಿದ್ದು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.