ಬಳ್ಳಾರಿ: ಬಾಲ್ಯದಲ್ಲಿಯೇ ಸಂವಿಧಾನ, ಪ್ರಜಾಪ್ರಭುತ್ವ, ನಾಯಕತ್ವವನ್ನು ಅರಿತುಕೊಳ್ಳುವುದು ಮತ್ತು ವ್ಯವಸ್ಥೆಯನ್ನು ಪ್ರಶ್ನಿಸುವದನ್ನು ಇಂದಿನ ಮಕ್ಕಳಿಗೆ ಕಲಿಸುವ ಅವಶ್ಯಕತೆ ಇದೆ, ಮಕ್ಕಳು ತಮ್ಮ ಹಕ್ಕುಗಳನ್ನು ಪ್ರಶ್ನಿಸುವ ಪ್ರಯತ್ನಗಳನ್ನು ಮಾಡಬೇಕು ಎಂದು ಬಳ್ಳಾರಿ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರು ಹೇಳಿದರು.
ನಗರದ ಬಿಡಿಡಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಂಸತ್-೨೦೨೩ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ತಾಲೂಕಿನ ಗ್ರಾಮೀಣಾ ಭಾಗದಿಂದ ಮಕ್ಕಳು ಈ ಸಂಸತ್ ಸಭೆಯಲ್ಲಿ ಭಾಗವಹಿಸುತ್ತಿರುವುದು ಖುಷಿಯ ವಿಚಾರ, ಮಕ್ಕಳು ಭಾಗವಹಿಸುವಿಕೆ ಹಾಗೂ ಪ್ರಶ್ನಿಸುವಿಕೆಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಹೆಚ್.ಸಿ ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ತಿಂಗಳಲ್ಲಿ ರಾಜ್ಯ ಮಟ್ಟದಲ್ಲಿ ಆಯೋಜಿಸುವ ರಾಜ್ಯ ಮಕ್ಕಳ ಸಂಸತ್‌ಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಅಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳು ಭಾಗವಹಿಸಿ ತಮ್ಮ ಅಹವಾಲು, ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ರಾಜ್ಯದ ಮುಖ್ಯಮಂತಿಗಳ ಜೊತೆ ಸಂವಾದ ಏರ್ಪಡಿಸುವ ಉದ್ದೇಶದಿಂದ ಈ ಸಂಸತ್‌ನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ ೨೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಂಸತ್ ಆಯೋಜಿಸಿ ರಾಜ್ಯ ಮಟ್ಟದ ಆಯೋಜನೆಗೆ ಪೂರ್ವ ತಯಾರಿ ಆರಂಭಿಸಲಾಗಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ತಾಲೂಕುಗಳಿಂದ ಮಕ್ಕಳ ಹಕ್ಕುಗಳ ಸಂಘದಿಂದ ಮಕ್ಕಳ ಪ್ರತಿನಿಧಿಗಳು ಆಗಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಕ್ಕಳು ತಮ್ಮ ಅಹವಾಲುಗಳನ್ನು ನಿರ್ಭೀತಿಯಿಂದ ಮಂಡಿಸಿ, ಹಕ್ಕುಗಳ ಉಲ್ಲಂಘನೆಯಾಗದಂತೆ ಸದಾ ಜಾಗೃತಿಯಿಂದ ಇರಬೇಕು. ನಿಮ್ಮ ಸಹಾಯಕ್ಕಿರುವ ಮಕ್ಕಳ ಸಹಾಯವಾಣಿ ೧೦೯೮ ಮತ್ತು ಪೊಲೀಸ್ ಸಹಾಯವಾಣಿ ೧೧೨ ಬಳಸಲು ಕರೆ ನೀಡಿದರು.
ಮಕ್ಕಳ ಸಂಸತ್‌ನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಚನ್ನಬಸಪ್ಪ, ಸ್ಥಳೀಯ ವಲ್ರ್ಡ್ ವಿಷನ್ ಸಂಸ್ಥೆಯ ಪ್ರೇಮಲತಾ, ರೀಡ್ಸ್ ಸಂಸ್ಥೆಯ ತಿಪ್ಪೇಶಪ್ಪ , ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವಸಹಾಯಸಂಘ(ರಿ)ನ ಪ್ರತಿನಿಧಿ ಶ್ವೇತಾ ಹಾಗೂ ಜಿಲ್ಲೆಯ ವಿವಿಧ ತಾಲೂಕಿನಿಂದ ೫೬ ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಚಿಕ್ಕ ಮಕ್ಕಳಿಂದ ಬಂದ ದೊಡ್ಡ ದೊಡ್ಡ ಪ್ರಶ್ನೆಗಳು ನೋಡುಗರಲ್ಲಿ ಆಶ್ಚರ್ಯ ಮೂಡಿಸಿದವು.