Tuesday, April 22, 2025
Google search engine

Homeರಾಜಕೀಯನ.15ರ ನಂತರ ಹಲವು ಜೆಡಿಎಸ್ -ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ: ಡಿ ಕೆ ಶಿವಕುಮಾರ್

ನ.15ರ ನಂತರ ಹಲವು ಜೆಡಿಎಸ್ -ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ: ಡಿ ಕೆ ಶಿವಕುಮಾರ್

ನವದೆಹಲಿ: ನವೆಂಬರ್ 15ನೇ ತಾರೀಖು, ದೀಪಾವಳಿ ಮುಗಿದ ನಂತರ ಹಲವು ಜೆಡಿಎಸ್ -ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ದೆಹಲಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಬುಧವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೀಪಾವಳಿ ನಂತರ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ನವೆಂಬರ್ 15ರಂದು ಮತ್ತಷ್ಟು ನಾಯಕರು ನಮ್ಮ ಪಕ್ಷಕ್ಕೆ ಸೇರುತ್ತಾರೆ ಎಂದು ಹೇಳುವ ಮೂಲಕ ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಈಗಿರುವ ಪರಿಸ್ಥಿತಿಯಲ್ಲಿ ನಮ್ಮ ಒಬ್ಬ ಶಾಸಕರನ್ನೂ ಅವರಿಗೆ ಕರೆದುಕೊಳ್ಳಲು ಆಗಲ್ಲ. ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆಯೇ ತೀರ್ಮಾನ‌ ಮಾಡಲು ಆಗಿಲ್ಲ. ಬಿಜೆಪಿಯವರು ಗೊಂದಲ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯಲ್ಲೇ ಸಾಕಷ್ಟು ಸಮಸ್ಯೆ ಇದೆ, ಹೀಗಿರುವಾಗ ನಮ್ಮ ಶಾಸಕರನ್ನು ಅವರು ಸೆಳೆದುಕೊಳ್ಳುವುದು ದೂರದ ಮಾತು ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರಿಗೆ ಅಸ್ಥಿತ್ವದಲ್ಲಿಲ್ಲದ ಪರಿಸ್ಥಿತಿ ಎದುರಾಗಿದೆ. ಸದ್ಯ ಅವರಿಗೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರಬೇಕು. ಅದಕ್ಕೋಸ್ಕರ ಅಲ್ಲಿಲ್ಲಿ ಹೋಗುತ್ತಾ, ಅವರಿವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾ ಸುದ್ದಿಯಾಗುತ್ತಿದ್ದಾರಷ್ಟೆ. ಮಾರ್ಕೆಟ್​ನಲ್ಲಿ ಇರುವುದಕ್ಕೆ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಭೆ ಆಗಿರುವ ಬಗ್ಗೆ ನಾನು ಮಾತನಾಡಲ್ಲ. ಎಲ್ಲಾ ಮೂಮೆಂಟ್​ ಗೊತ್ತಿದೆ, ನಿರುದ್ಯೋಗಿಗಳು ಚಪಲಕ್ಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿಗಳು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಅದೇ ಸಂತೋಷ. ನಮ್ಮ ಗ್ಯಾರಂಟಿ, ನಮ್ಮ ಒಗ್ಗಟ್ಟು, ಜನರ ತೀರ್ಮಾನ ಅವರ ನಿದ್ದೆ ಕೆಡಿಸಿದೆ. ಅದಕ್ಕೆ‌ ನೆನಪಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.

RELATED ARTICLES
- Advertisment -
Google search engine

Most Popular