Tuesday, April 22, 2025
Google search engine

Homeರಾಜ್ಯಸುದ್ದಿಜಾಲಬ್ಯಾಂಕ್ ಅಧಿಕಾರಿಗಳು ಸಂವೇದನಾಶೀಲರಾಗಿ ವರ್ತಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಬ್ಯಾಂಕ್ ಅಧಿಕಾರಿಗಳು ಸಂವೇದನಾಶೀಲರಾಗಿ ವರ್ತಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ : ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದೆ. ರೈತರ ಬೆಳೆಸಾಲವನ್ನು ಕಾಲಮಿತಿಯಲ್ಲಿ ಪುನರ್ ರಚಿಸಬೇಕು. ಸರಕಾರ ರೈತರಿಗೆ ಸಾಲ ತುಂಬುವಂತೆ ಒತ್ತಾಯಿಸಿ, ಯಾವುದೇ ನೋಟಿಸ್ ನೀಡದಂತೆ ಸೂಚಿಸಿದೆ. ಮತ್ತು ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯು ಎಲ್ಲ ಬ್ಯಾಂಕ್‍ಗಳಿಗೆ ತಿಳಿಸಿದೆ. ಆದರೂ ಕೆಲವು ಬ್ಯಾಂಕ್ ಮ್ಯಾನೇಜರ್ ಅವರು ರೈತರಿಗೆ ನೋಟೀಸ್ ನೀಡುತ್ತಿರುವುದು ಕಂಡು ಬಂದಿದೆ. ಅಂತಹ ಬ್ಯಾಂಕುಗಳ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಎಚ್ಚರಿಸಿದರು.

ಅವರು ಇಂದು ನ.08 ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಬ್ಯಾಂಕರ್ಸ್‍ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಮತ್ತು ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇಲಾಖೆ ಶಿಪಾರಸ್ಸು ಬಂದ ತಕ್ಷಣ ವಿಳಂಬವಿಲ್ಲದೆ ಸಾಲ ಮಂಜೂರಿ ಆಗಬೇಕು. ಪ್ರತಿ ಬ್ಯಾಂಕ್‍ಗಳಿಗೆ ನೀಡಿದ ಗುರಿಯ ಪ್ರಗತಿಯನ್ನು ಪ್ರತಿಯೊಬ್ಬರು ಸಾಧಿಸಬೇಕು ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿಧಾನ ಮಾಡಬಾರದು. ಸರಕಾರದ ಸಾಲ ಸೌಲಭ್ಯ, ಸಹಾಯಧನ ಫಲಾನುಭವಿಗಳಿಗೆ ಸಕಾಲದಲ್ಲಿ ಸಿಗುವಂತೆ ಮಾಡುವುದು ಎಲ್ಲ ಬ್ಯಾಂಕ್ ವ್ಯಸ್ಥಾಪಕರ ಜವಾಬ್ದಾರಿ ಆಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಕೆವಿಜಿಬಿ ಬ್ಯಾಂಕ್ ಶಾಖೆಗಳು ಹೆಚ್ಚಾಗಿವೆ. ಸಿಡಿ ರೇಶಿಯೋ ಪ್ರಮಾಣ ಶೇ.44 ರಷ್ಟಿದೆ. ಇದು ಅತ್ಯಂತ ಕಡಿಮೆ ಇದ್ದು, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರು ಕೆವಿಜಿಬಿ ಬ್ಯಾಂಕ್ ಹಿರಿಯ ಅಧಿಕಾರಿಗಳ, ಶಾಖಾ ವ್ಯವಸ್ಥಾಪಕರ ಪ್ರತ್ಯೇಕ ಸಭೆ ಜರುಗಿಸಿ, ಈ ಕುರಿತು ಪ್ರಗತಿಗಾಗಿ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆ ಮತ್ತು ಕಾಳಜಿಯಿಂದ ವರ್ತಿಸಬೇಕು. ಸಾಲ ವಸೂಲಾತಿ, ಹೊಸ ಸಾಲ ವಿತರಣೆ, ಸಬ್ಸಿಡಿ, ಪರಿಹಾರ ಹಣ ಜಮೆ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಕಾಲಕಾಲಕ್ಕೆ ಸರಕಾರ, ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಮತ್ತು ಜಿಲ್ಲಾ ಬ್ಯಾಂಕರ್ಸ್ ಸಲಹಾ ಸಮಿತಿ ನೀಡುವ ಸಲಹೆ, ಮಾರ್ಗಸೂಚಿಗಳನ್ನು ಜಿಲ್ಕೆಯ ಎಲ್ಲ ಬ್ಯಾಂಕ್ ಶಾಖೆಗಳು ಪಾಲಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭೂದೇವ್ ಎನ್.ಜಿ. ಅವರು ಮಾತನಾಡಿ, ಜಿಲ್ಲೆಯ ಎಲ್ಲ ಬ್ಯಾಂಕ್‍ಗಳು ಗುರಿಗೆ ಅನುಗುಣವಾಗಿ ಕೆಲಸ ಮಾಡುತ್ತಿವೆ. ಸಬ್ಸಿಡಿ ಹಣವನ್ನು ಸಂಭಂಧಿಸಿದ ಫಲಾನುಭವಿಗಳ ಖಾತೆಗೆ ಬಿಡುಗಡೆಯಾದ ತಕ್ಷಣ ಜಮೆ ಮಾಡಬೇಕೆಂದು ಹೇಳಿದರು.

ಸಭೆಯಲ್ಲಿ ಧಾರವಾಡ ಜಿಲ್ಲಾ ನಬಾರ್ಡ್ ರೂಪಿಸಿರುವ 2024-25 ನೇ ಸಾಲಿನ ಪೊಟೆನಶಲ್ ಲಿಂಕಡ್ ಕ್ರೆಡಿಟ್ ಪ್ಲಾನ್ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‍ಗಳ ಮುಖ್ಯಸ್ಥರು, ವಿವಿಧ ನಿಗಮ, ಮಂಡಳಿ, ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ನಗರಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular