ಯಳಂದೂರು: ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಯಳಂದೂರು ಪಪಂ ಕಾರ್ಯಾಲಯ ವತಿಯಿಂದ ಕೇಂದ್ರದ ಅಮೃತ್ ೨.೦ ಯೋಜನೆಯಡಿಯಲ್ಲಿ ಬುಧವಾರ ಉತ್ತಂಬಳ್ಳಿ ಗ್ರಾಮದ ಬಳಿ ಇರುವ ನೀರು ಸಂರಕ್ಷಣಾ ಘಟಕದಲ್ಲಿ ಹಮ್ಮಿಕೊಂಡಿದ್ದ ಜಲ ದೀಪಾವಳಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಾತನಾಡಿ, ಕೇಂದ್ರದ ಅಮೃತ್ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ರಾಜ್ಯದ ೮೪ ನಗರಗಳಲ್ಲಿ ಈ ಕಾರ್ಯಕ್ರಮ ಏಕಕಾಲಕ್ಕೆ ನಡೆಯಲಿದೆ. ಇದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ಪಟ್ಟಣ ಪಂಚಾಯಿತಿ ಮಾತ್ರ ಇದಕ್ಕೆ ಆಯ್ಕೆಯಾಗಿದೆ. ಇದರ ಉದ್ದೇಶ ಜಲ ಸಂರಕ್ಷಣೆಯಾಗಿದೆ.
ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಪಪಂ ವ್ಯಾಪ್ತಿಯ ವಿವಿಧ ಸ್ವಸಹಾಯ ಗುಂಪಿನ ೩೦ ಮಹಿಳೆಯರು ಇದರಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಮುಳ್ಳೂರು ಗ್ರಾಮದ ಕಾವೇರಿ ನದಿ ಬಳಿಯ ಜಾಕ್‌ವೆಲ್‌ನಲ್ಲಿ ಕಚ್ಚಾ ನೀರು ಎತ್ತುವುದು, ಅಲ್ಲಿಂದ ಸಂಸ್ಕರಣಾ ಘಟಕಕ್ಕೆ ಕರೆತಂದು ನೀರನ್ನು ಶುದ್ಧೀಕರಿಸುವ ಎಲ್ಲಾ ಪ್ರಕ್ರಿಯೆಗಳನ್ನು ಪ್ರಾಯೋಗಿಕವಾಗಿ ಇಲ್ಲಿ ತೋರಿಸಿ ನಂತರ ನೀರಿನ ಮಹತ್ವ ಇದರ ಉಳಿವಿನ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ಎಇ ಮಲ್ಲೇಶ್ ಮಾತನಾಡಿ, ನೀರು ಅಮೂಲ್ಯವಾಗಿದೆ. ಇದನ್ನು ಮಿತವಾಗಿ ಬಳಸಬೇಕು, ಮಹಿಳೆಯರು ನೀರಿನ ಬಳಕೆ ಹೆಚ್ಚು ಮಾಡುವುದರಿಂದ ಇದರ ಮಹತ್ವವನ್ನು ಪ್ರಾಯೋಗಿಕವಾಗಿ ತೋರಿಸುವ ಕಾರ್ಯಕ್ರಮ ಇದಾಗಿದೆ. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಅಲ್ಲದೆ ನೀರಿನ ಕಂದಾಯವನ್ನು ನಿಗಧಿತ ಸಮಯದೊಳಗೆ ಪಾವತಿಸಿ ಪಂಚಾಯಿತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿ ಹರೀಶ್ ಮಾತನಾಡಿ, ಭೂಮಿ ಮೇಲಿರುವ ನೀರಿನಲ್ಲಿ ಶೇ. ೯೭ ರಷ್ಟು ನೀರು ಸಮುದ್ರದಲ್ಲಿದೆ. ಶೇ ೨ ರಷ್ಟು ನೀರು ಹಿಮದ ರೂಪದಲ್ಲಿದೆ. ನಾವು ನಿತ್ಯ ಬಳಸುವ ನೀರು ಶೇ. ೧ ರಷ್ಟು ಮಾತ್ರ ಇದೆ. ಹಾಗಾಗಿ ಇದನ್ನು ಒಂದು ಸಂಪನ್ಮೂಲ ಎಂದು ಎಲ್ಲರೂ ಅರಿಯಬೇಕು. ಇದು ಮುಗಿದರೆ ಇಡೀ ಜೀವ ಕೋಟಿ ಅಂತ್ಯವಾಗಲಿದೆ. ಪ್ರತಿ ಹನಿ ನೀರು ಅಮೂಲ್ಯವಾಗಿದೆ.
ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ. ನದಿ, ಸೇರಿದಂತೆ ಹಲವು ಜನಮೂಲಗಳು ಇಂದು ಮಲಿನವಾಗುತ್ತಿದೆ. ಇದರ ಬಳಕೆ ನಿಲ್ಲಿಸಬೇಕು, ಪರಿಶುದ್ಧ ನೀರಿನ ಪ್ರಮಾಣ ಕಡಿಮೆ ಇದ್ದು ಇದನ್ನು ಜತನ ಮಾಡುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು. ಪಪಂ ಸದಸ್ಯರಾದ ವೈ.ಜಿ. ರಂಗನಾಥ, ಮಹೇಶ್, ನೀರು ಸರಬರಾಜು ಇಲಾಖೆಯ ಎಇಇ ಉಮೇಶ್, ವ್ಯವಸ್ಥಾಪಕ ಅಮ್ಜದ್‌ಪಾಷ ಮಾತನಾಡಿದರು.
ಪಪಂ ಸದಸ್ಯರಾದ ಪ್ರಭಾವತಿ ರಾಜಶೇಖರ್, ಶಾಂತಮ್ಮ ನಿಂಗರಾಜು, ಮಹದೇವನಾಯಕ, ನೀರು ಸರಬರಾಜು ಇಲಾಖೆಯ ವ್ಯವಸ್ಥಾಪಕ ಪುಟ್ಟಸ್ವಾಮಿ, ಜೆಇ ನಾಗೇಂದ್ರ, ಪರಮೇಶ್ವರಪ್ಪ, ಪರಮೇಶ್,ಮಲ್ಲಿಕಾರ್ಜುನ, ಜಯಲಕ್ಷ್ಮಿ, ಲಕ್ಷ್ಮಿ, ರೇಖಾ, ವಿಜಯ ಸೇರಿದಂತೆ ಅನೇಕರು ಇದ್ದರು.