ರಾಮನಗರ: ಜಿಲ್ಲೆಯಲ್ಲಿನವ ಭಾರತ ಸಾಕ್ಷರತಾ ಕಾರ್ಯಕ್ರಮದಡಿ ಸಾಕ್ಷರತಾ ಸಮೀಕ್ಷೆಯನ್ನು ಮಾಡಿ ಪ್ರತಿ ಗ್ರಾಮಕ್ಕೆ ಸಂಬಂಧಿಸಿದ ಅನಕ್ಷರಸ್ಥರ ಮಾಹಿತಿಯನ್ನು ಸಂಗ್ರಹಿಸಿ ಕಲಿಕಾ ಕೇಂದ್ರಗಳನ್ನು ಪ್ರಾರಂಭ ಮಾಡಲು ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ ಅವರು ತಿಳಿಸಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಉಲ್ಲಾಸ್‌ಆಪ್ ಮೂಲಕ ಅನುಷ್ಠಾನಗೊಳಿಸಲು, ಅನಕ್ಷರಸ್ಥರ-ಬೋಧಕರ ಸರ್ವೆ ಮಾಡಲು, ಕಲಿಕಾ-ಬೋಧನೆ ಸಾಮಾಗ್ರಿಗಳ ಹಂಚಿಕೆ, ಸಮುದಾಯದಲ್ಲಿ ಸಂಚಲನವನ್ನು ಉಂಟು ಮಾಡಲು ಮತ್ತು ಸಾಮಾಜಿಕ ಚೇತನ ಕೇಂದ್ರಗಳನ್ನು ತೆರೆಯಲು, ಮೌಲ್ಯಮಾಪನ ಮತ್ತು ಪ್ರಮಾಣೀಕರಿಸುವ ಚಟುವಟಿಕೆಗಳನ್ನು ರೂಪಿಸಲು ಹಾಗೂ ರಾಜ್ಯ ಮಟ್ಟದಲ್ಲಿ ಉಲ್ಲಾಸ್ ಕಾರ್ಯಕ್ರಮದ ಮೂಲಕ ಶೇ. ೧೦೦ ರಷ್ಟು ಸಾಕ್ಷರತೆಯನ್ನು ಖಚಿತಪಡಿಸಿಕೊಳ್ಳಲು ಸಾಕ್ಷರತಾ ಕಾರ್ಯಪಡೆ ಅತ್ಯಂತ ಅವಶ್ಯಕವಾಗಿದೆ ಎಂದರು.
ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿನ ಪೌರ ಕಾರ್ಮಿಕರ ಅನಕ್ಷರಸ್ಥರನ್ನು, ಕೊಳಚೆ ಪ್ರದೇಶಗಳಲ್ಲಿರುವ ಅನಕ್ಷರಸ್ಥರನ್ನು ಹಾಗೂ ವಲಸೆ ಜನಾಂಗ ಹಾಗೂ ನಗರ ಮತ್ತು ಪುರಸಭೆ ವ್ಯಾಪ್ತಿಯ ಹಿಂದುಳಿದ ಅನಕ್ಷರಸ್ಥರನ್ನು ಕಲಿಕಾ ಕೇಂದ್ರಗಳಿಗೆ ನೋಂದಾಯಿಸಲು ಕ್ರಮ ವಹಿಸುವುದು ಹಾಗೂ ನಗರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಮಾಡಲು ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯು ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಅನಕ್ಷರಸ್ಥರಿಗೆ ಸ್ವಯಂ ಸೇವ ಬೋಧಕರಾಗಿ ಬೋಧನೆ ಮಾಡಲುಕ್ರಮವಹಿಸುವಂತೆ ತಿಳಿಸಿದರು.ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಹಂತದಲ್ಲಿ ಸಾಕ್ಷರತಾ ಕಾರ್ಯಪಡೆಗಳನ್ನು ರಚಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕರು ಸಾಕ್ಷರತಾ ಸಮೀಕ್ಷೆ ಸಂದರ್ಭದಲ್ಲಿ ಪ್ರತಿ ಗ್ರಾಮಕ್ಕೆ ಸಂಬಂಧಿಸಿದ ಅನಕ್ಷರಸ್ಥರ ಮಾಹಿತಿಯನ್ನು ಸಂಗ್ರಹಿಸಿ, ಕಲಿಕಾ ಕೇಂದ್ರಗಳ ಪ್ರಾರಂಭ ಹಾಗೂ ಪರೀಕ್ಷಾ ಸಂದರ್ಭದಲ್ಲಿ ಸಾಕ್ಷರತಾ ಇಲಾಖೆಯೊಂದಿಗೆ ಸಹಕರಿಸಲು ಕ್ರಮವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಉಲ್ಲಾಸ್ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.ಸಭೆಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಂಕರೇಗೌಡ, ನಗರಸಭೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಕಾರ್ಯಕ್ರಮ ಸಹಾಯಕರಾದ ಪವಿತ್ರಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.