ಮದ್ದೂರು: ಗಾಂಧಿವಾದಿ, ಶಿಕ್ಷಣ ತಜ್ಞ, ಸರಳ ಸಜ್ಜನಿಕೆ ಕೆ.ಟಿ.ಚಂದುರವರಿಗೆ ಸರ್ಕಾರವು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ತುಂಬಾ ಸಂತೋಷದಾಯಕ ವಿಚಾರ ಎಂದು ಬಿಇಒ ಸಿ.ಎಚ್.ಕಾಳೀರಯ್ಯ ಸಂತೋಷ ವ್ಯಕ್ತಪಡಿಸಿದರು.
ಚನ್ನೇಗೌಡನದೊಡ್ಡಿಯ ಕೆ.ಟಿ.ಚಂದು ಅವರ ನಿವಾಸದಲ್ಲಿ ಮಂಗಳವಾರ ಕೆ.ಟಿ.ಚಂದು ಅವರನ್ನು ಶಿಕ್ಷಣ ಇಲಾಖೆ ಹಾಗೂ ಸಂಘ, ಸಂಸ್ಥೆಗಳ ವತಿಯಿಂದ ಅಭಿನಂದಿಸಿ ಮಾತನಾಡಿದರು.
ಕೆ.ಟಿ.ಚಂದುರವರು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ , ವಿದ್ಯೆ ಎಟುಕದ ಅದೆಷ್ಟೋ ಮಂದಿ ಯುವಕ, ಯುವತಿಯರಿಗೆ ಶಿಕ್ಷಣ ಪಡೆಯುವಂತೆ ಮಾಡಿ. ಅವರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೂಲಾಗ್ರ ಸಾಧನೆ ಮಾಡಲು ಕಾರಣವಾಗುವ ಜತೆಗೆ ಸಮಾಜಕ್ಕೆ ತಮ್ಮದೆಯಾದ ವಿವಿಧ ರೀತಿಯ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಕೆ.ಟಿ.ಚಂದು ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಮಾಜದಲ್ಲಿ ಇವರು ಮತ್ತಷ್ಟು ಸಾಧನೆ ಮಾಡಲು ದೇವರು ಇವರಿಗೆ ಆಯಸ್ಸು, ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುವ ಜತೆಗೆ ಇವರ ಮಾರ್ಗದರ್ಶನ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅನಂತೇಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಬಿಆರ್ಸಿ ಕಚೇರಿಯ ಸಮನ್ವಯ ಅಧಿಕಾರಿ ಹನುಮಶೆಟ್ಟಿ, ಶಿಕ್ಷಕರಾದ ಯು.ಎಸ್.ರವಿಕುಮಾರ್, ವರದರಾಜು, ಆನಂದ್, ಪ್ರಕಾಶ್, ಚಂದ್ರು, ಬಿಇಓ ಕಚೇರಿಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.
