ಚಾಮರಾಜನಗರ : ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಲೂಕಿನ ವೆಂಕಟಯ್ಯನಛತ್ರ ಕಾಲೇಜಿನ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕ್ರೀಡಾಕೂಟದಲ್ಲಿ ೧೩ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ವಿದ್ಯಾರ್ಥಿಗಳಾದ ತೇಜಸ್ ೮೦೦ ಮೀ ಓಟದಲ್ಲಿ ಪ್ರಥಮ, ೪೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಯೋಗೇಶ ೩೦೦೦ ಮೀ ಓಟದಲ್ಲಿ ಪ್ರಥಮ, ಜಯಲಕ್ಷ್ಮಿ ೧೫೦೦ ಮೀ ಓಟದಲ್ಲಿ ಪ್ರಥಮ, ನದಿಯಾ ೫೦೦೦ ಮೀ ಓಟದಲ್ಲಿ ಪ್ರಥಮ, ಶಿವು ೩೦೦೦ ಮೀ ಓಟದಲ್ಲಿ ದ್ವಿತೀಯ, ರಾಧಿಕಾ ೩೦೦೦ ಮೀ ಓಟದಲ್ಲಿ ದ್ವಿತೀಯ, ರವೀಂದ್ರ ವೇಗ ನಡಿಗೆಯಲ್ಲಿ ದ್ವಿತೀಯ, ಶೈಲಜ ೧೦೦ ಮೀ ಓಟದಲ್ಲಿ ದ್ವಿತೀಯ, ಗೌರಮ್ಮ ೮೦೦ ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಕಬ್ಬಡ್ಡಿಯಲ್ಲಿ ತೇಜಸ್, ಯೋಗೇಶ, ಖೋ ಖೋ ದಲ್ಲಿ ಶೈಲಜ ಮತ್ತು ಗೌರಮ್ಮ ಸಹ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಸ್. ನಾಗೇಶ ಅವರು ವಿಜಯಶಾಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೋರಿದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ಪ್ರಾಂಶುಪಾಲರು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮತ್ತಷ್ಟು ಸಾಧನೆ ತೋರಿ ಜಿಲ್ಲೆಗೆ ಹಾಗೂ ಕಾಲೇಜಿಗೆ ಹೆಚ್ಚಿನ ಕೀರ್ತಿ ತರಬೇಕು. ಕ್ರೀಡಾ ಪ್ರೀತಿಯನ್ನು ವಿದ್ಯಾರ್ಥಿಗಳು ಕಾಪಿಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು. ಇದೇ ವೇಳೆ ವಿದ್ಯಾರ್ಥಿಗಳ ಸಾಧನೆ ಹಾಗೂ ತರಬೇತಿಗೆ ಮಾರ್ಗದರ್ಶನ ಮಾಡಿದ ಭೂಗೋಳ ಶಾಸ್ತ್ರ ಉಪನ್ಯಾಸಕರಾದ ಮಹಾಂತೇಶ ಕುರುಬರ ಪ್ರೋತ್ಸಾಹ ಹಾಗೂ ಶ್ರಮವನ್ನು ಪ್ರಾಂಶುಪಾಲರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಲ್ಲೇಶ, ಪ್ರಶಾಂತ.ಎಸ್, ಮಹೇಶ್.ಆರ್, ಪೂರ್ಣಿಮಾ.ಎ, ಅನಿತಾ.ಜೆ, ಗೋವಿಂದ.ವಿ, ಶೀಲಾವತಿ.ಎಸ್. ಮಹಾಂತೇಶ ಕುರುಬರ ಇತರರು ಉಪಸ್ಥಿತರಿದ್ದರು.