Saturday, April 19, 2025
Google search engine

Homeರಾಜ್ಯಟಿಹೆಚ್‌ ಡಿಸಿಎಲ್‌ ಜತೆ 15,000 ಕೋಟಿ ರೂ. ವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ

ಟಿಹೆಚ್‌ ಡಿಸಿಎಲ್‌ ಜತೆ 15,000 ಕೋಟಿ ರೂ. ವಿದ್ಯುತ್ ಯೋಜನೆಗಳ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ

ಒಡಂಬಡಿಕೆಗೆ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್, ಕ್ರೆಡಲ್‌ ಮತ್ತು ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಸಹಿ

ಬೆಂಗಳೂರು: ರಾಜ್ಯದಲ್ಲಿ ಪಂಪ್ಡ್ ಸ್ಟೋರೇಜ್, ಹೈಡ್ರೋ, ಸೋಲಾರ್ ಸೇರಿದಂತೆ 15,000 ಕೋಟಿ ರೂ. ಮೊತ್ತದ ವಿವಿಧ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸ್ವಾಮ್ಯದ ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಜತೆ ರಾಜ್ಯ ಸರ್ಕಾರ ಸಹಿ ಹಾಕಿದೆ.

ಇಂಧನ ಸಚಿವ ಕೆ ಜೆ ಜಾರ್ಜ್ ಅವರ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಪರವಾಗಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಹಾಗೂ ಟಿಹೆಚ್‌ಡಿಸಿಎಲ್‌  ತಾಂತ್ರಿಕ ನಿರ್ದೇಶಕ ಭೂಪೇಂದ್ರ ಗುಪ್ತ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

“ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಗಳನ್ನು ಪರಿಹರಿಸಲು ಈ ಒಪ್ಪಂದ ಪೂರಕವಾಗಿದ್ದು, ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ಧ,” ಎಂದು ಇಂಧನ ಸಚಿವರು ತಿಳಿಸಿದರು.

“ದಿಲ್ಲಿಯಲ್ಲಿ ಈ ಹಿಂದೆ ಕೇಂದ್ರ ಇಂಧನ ಸಚಿವ ಆರ್‌ಕೆ ಸಿಂಗ್ ಮತ್ತು ಟಿಹೆಚ್‌ಡಿಸಿಎಲ್‌ನ ಸಿಎಂಡಿ ಆರ್.ಕೆ. ವಿಷ್ಣೋಯ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಒಪ್ಪಂದ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿತ್ತು. ಅದರ ಫಲವಾಗಿ ನಾವು ಇಂದು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಒಪ್ಪಂದದಂತೆ ಆದ್ಯತೆ ಮೇರೆಗೆ ಕರ್ನಾಟಕಕ್ಕೆ ವಿದ್ಯುತ್‌ ಒದಗಿಸುವುದಾಗಿ ಟಿಹೆಚ್‌ಡಿಸಿಎಲ್‌ ಭರವಸೆ ನೀಡಿದೆ,”ಎಂದರು.

“ಕದ್ರಾ ಅಣೆಕಟ್ಟು ಜಲಾಶಯದಲ್ಲಿ 100 ಮೆಗಾವ್ಯಾಟ್‌ ಸಾಮರ್ಥ್ಯದ ಫ್ಲೋಟಿಂಗ್‌ ಸೋಲಾರ್ ಪಿವಿ ಸ್ಥಾವರದ ಅಭಿವೃದ್ಧಿ, 170 ಮೆಗಾವ್ಯಾಟ್  ಸಾಮರ್ಥ್ಯದ ಗ್ರೌಂಡ್‌ ಮೌಂಟೆಡ್‌ ಯೋಜನೆ, ಕೆಪಿಸಿಎಲ್  ಆವರಣದಲ್ಲಿ ಮೇಲ್ಛಾವಣಿ ಸೌರ ಪಿವಿ ಸ್ಥಾವರ ಮತ್ತು ವಾರಾಹಿಯಲ್ಲಿ 1500 ಮೆಗಾವ್ಯಾಟ್‌ ಸಾಮರ್ಥ್ಯದ  ಪಂಪ್ಡ್ ಸ್ಟೋರೇಜ್ ಘಟಕ ಸ್ಥಾಪನೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ”, ಎಂದು ಸಚಿವರು ವಿವರಿಸಿದರು.

“ನವೀಕರಿಸಬಹುದಾದ ಇಂಧನ ಮತ್ತು ಹೈಡ್ರೋ ಮತ್ತು ಪಂಪ್ ಹೈಡ್ರೋ ವಲಯದಲ್ಲಿ ಅಪಾರ ಅನುಭವ ಇರುವ ಟಿಹೆಚ್‌ಡಿಸಿಎಲ್‌ ರಾಜ್ಯದಲ್ಲಿ  ವಿದ್ಯುತ್ ಉತ್ಪಾದನೆ ಯೋಜನೆ ಕೈಗೊಳ್ಳುವ  ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮುಂದಿನ ಹಂತದಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕಾರ್ಯಸಾಧ್ಯತೆಯ ಅಧ್ಯಯನ ಕೈಗೊಳ್ಳಲಾಗುವುದು ಮತ್ತು ಎಲ್ಲ ಅಗತ್ಯ ಅನುಮೋದನೆಗಳನ್ನು ಪಡೆಯುವುದಾಗಿ ಟಿಹೆಚ್‌ಡಿಸಿಎಲ್‌ ಮುಖ್ಯಸ್ಥರು ಭರವಸೆ ನೀಡಿದ್ದಾರೆ,” ಎಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತ ತಿಳಿಸಿದರು.

ಕ್ರೆಡಲ್‌ ಜತೆ ಒಪ್ಪಂದ:

 1 ಗಿ.ವ್ಯಾ. ಹೈಬ್ರಿಡ್ ಯೋಜನೆ ಮತ್ತು  500 ಮೆಗಾ ವ್ಯಾಟ್‌ ಸಾಮರ್ಥ್ಯದ ಬೀದರ್ ಸೋಲಾರ್ ಪಾರ್ಕ್‌ ಅಭಿವೃದ್ಧಿ ಸಂಬಂಧ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ ಜತೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.  ಟಿಹೆಚ್‌ಡಿಸಿಎಲ್‌ನ ತಾಂತ್ರಿಕ ನಿರ್ದೇಶಕ ಭೂಪೇಂದರ್ ಗುಪ್ತಾ  ಹಾಗೂ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಅವರು ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಅದರಂತೆ ಟಿಹೆಚ್‌ಡಿಸಿಎಲ್‌ ಕೈಗೊಳ್ಳುವ ನವೀಕರಿಸಬಹುದಾದದ ಇಂಧನ ಯೋಜನೆಗಳಿಗೆ ನವೀಕರೀಸಬಹುದಾದದ ಇಂಧನ ನೀತಿ 2022-27ರ ಅನ್ವಯ ಕ್ರೆಡಲ್‌ ನೆರವು ಒದಗಿಸಲಿದೆ.

ಸಭೆಯಲ್ಲಿ  ಟಿಹೆಚ್‌ ಡಿಸಿಎಲ್‌ ಮುಖ್ಯ ವ್ಯವಸ್ಥಾಪಕ ಸಂದೀಪ್ ಸಿಂಘಾಲ್, ಟಿಹೆಚ್‌ಡಿಸಿಎಲ್‌ ಸಹಾಯಕ ಮುಖ್ಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಉದಯಗಿರಿ, ಟಿಹೆಚ್‌ಡಿಸಿಎಲ್‌ನ ವಿಶೇಷ ಅಧಿಕಾರಿ,  ಗುಜರಾತ್ ಸರ್ಕಾರದ ಮಾಜಿ ವಿಶೇಷ ಆಯುಕ್ತ ಎಕೆ ವಿಜಯ್ ಕುಮಾರ್ ಮತ್ತು ಇತರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular