Tuesday, April 22, 2025
Google search engine

Homeರಾಜಕೀಯವಿನಾಶಕಾಲೇ ವಿಪರೀತ ಬುದ್ಧಿ! ವಿನಾಶಕಾಲೇ ವಿಪರೀತ ಆಸೆ: ಕಾಂಗ್ರೆಸ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ವಿನಾಶಕಾಲೇ ವಿಪರೀತ ಬುದ್ಧಿ! ವಿನಾಶಕಾಲೇ ವಿಪರೀತ ಆಸೆ: ಕಾಂಗ್ರೆಸ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡಲಾಗುತ್ತಿದ್ದ ಸಬ್ಸಿಡಿಗೆ ಕತ್ತರಿ ಹಾಕಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಪೊಳ್ಳು ಗ್ಯಾರಂಟಿಗಳ ಮೂಲಕ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿ ಅಂಚಿಗೆ ನೂಕಿರುವ ಸರಕಾರ, ರೈತರ ಮೇಲೆಯೂ ವಕ್ರದೃಷ್ಟಿ ಬೀರಿದೆ. ಬರ, ವಿದ್ಯುತ್ ಕ್ಷಾಮದಿಂದ ಕಂಗೆಟ್ಟು ಹೋಗಿರುವ ಅನ್ನದಾತರಿಗೆ ಮತ್ತೊಂದು ಬರೆ ಎಳೆದು, ತಾನು ರೈತದ್ರೋಹಿ ಎಂದು ಸಾಬೀತು ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

‘ಗ್ಯಾರಂಟಿಗಳಿಗೆ ಪ್ರಚಾರ ಜಾಸ್ತಿ, ಅಭಿವೃದ್ದಿಗೆ ಹಣ ನಾಸ್ತಿ’ ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದೆ. ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡುತ್ತಿದ್ದ ಸಬ್ಸಿಡಿಗೆ ಕಾಂಗ್ರೆಸ್ ಸರಕಾರ ಕತ್ತರಿ ಹಾಕಿದೆ ಎನ್ನುವ ಸರಕಾರಿ ಆದೇಶ ನೋಡಿ ನನಗೆ ತೀವ್ರ ಆಘಾತ ಉಂಟಾಯಿತು. ಕೇಡುಗಾಲಕ್ಕೆ ಕೋಳಿಯು ಮೊಟ್ಟೆ ಬದಲು ಮರಿಯನ್ನೇ ಹಾಕಿತು ಎನ್ನುವ ಹಾಗೆ ಕಾಂಗ್ರೆಸ್ ಸರಕಾರ ಎರಡು ಕೈಗಳಿಂದಲೂ ರೈತರ ಮೇಲೆ ಮಣ್ಣು ಹಾಕುತ್ತಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದ ಅನ್ನದಾತರಿಗೆ ಇದುವರೆಗೆ ಟ್ರಾನ್ಸ್ ಫಾರ್ಮ್, ವಿದ್ಯುತ್ ಕಂಬ, ಅಲ್ಯುಮಿನಿಯಂ ತಂತಿ ಇತ್ಯಾದಿಗಳಿಗೆ ಸರಕಾರವೇ ಸಬ್ಸಿಡಿ ಕೊಡುತ್ತಿತ್ತು. ಚುನಾವಣೆಯಲ್ಲಿ ಮತಕ್ಕಾಗಿ ಯಾವ ಹಸ್ತ ರೈತರ ಪಾದ ಮುಟ್ಟಿ ಮತಯಾಚನೆ ಮಾಡಿತೋ, ಈಗ ಅದೇ ಹಸ್ತ ಅಧಿಕಾರ ಸಿಕ್ಕ ಮೇಲೆ ಅನ್ನದಾತನ ಕೊರಳಿಗೆ ಹಗ್ಗ ಬಿಗಿಯತೊಡಗಿದೆ! ಇದಕ್ಕಿಂತ ಪೈಶಾಚಿಕ ಮನಃಸ್ಥಿತಿ ಮತ್ತೊಂದು ಇರಲು ಸಾಧ್ಯವೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ಪಾಲಿನ 24,000 ರೂಪಾಯಿ ಭರಿಸುವುದಕ್ಕೇ ಇನ್ನಿಲ್ಲದ ಕಡುಕಷ್ಟ ಅನುಭವಿಸುತ್ತಿರುವ ರೈತರು, ಇನ್ನು ಮುಂದೆ ಪೂರ್ಣ ವೆಚ್ಚ ಭರಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಕಟುಕರ ಕೈಗೆ ಕರ್ನಾಟಕ ಸಿಕ್ಕಿ ನರಳುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಪುರಾವೆ ಬೇಕೆ? ಅಧಿಕಾರಕ್ಕೆ ಬಂದಾಗಿನಿಂದ ಸಮಾಧಿ ಸ್ಥಿತಿಯಲ್ಲಿರುವ ಈ ಸರಕಾರವು, ಇಂಥ ಜನದ್ರೋಹಿ ಕೃತ್ಯಗಳಲ್ಲಿ ಬಹಳ ಕ್ರಿಯಾಶೀಲವಾಗಿದೆ! ಎಂದು ಅವರು ಕೆಂಡ ಕಾರಿದ್ದಾರೆ.

ಸರಕಾರ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಲೇಬೇಕು. ಮೊದಲಿನಂತೆ ರೈತರಿಗೆ ಸಬ್ಸಿಡಿ ಕೊಡಬೇಕು. ಒಂದು ವೇಳೆ ಆದೇಶ ವಾಪಸ್ ಪಡೆಯದಿದ್ದರೆ ಜೆಡಿಎಸ್ ಪಕ್ಷ ಸದನದ ಒಳಗೆ, ಹೊರಗೆ ಹೋರಾಟಕ್ಕೆ ಇಳಿಯುತ್ತದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಬಂಡವಾಳಶಾಹಿ ಮನಃಸ್ಥಿತಿಯ ಲಾಭಕೋರ ಪಕ್ಷ. ಕಸಾಯಿ ಸಂಸ್ಕೃತಿಯ ಕಟುಕ ಪಕ್ಷ. ಅದಕ್ಕೆ ಕರುಣೆ, ದಯೆ, ದಾಕ್ಷಿಣ್ಯ ಎನ್ನುವುದು ಇರುವುದಿಲ್ಲ. ಇಡೀ ಕರ್ನಾಟಕವನ್ನೇ #ATM ಮಾಡಿಕೊಂಡು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರಕಾರ, ಈಗ ರೈತರನ್ನೂ ಕೊಳ್ಳೆ ಹೊಡೆಯುತ್ತಿದೆ. ಒಂದು ಕೈಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ರಾವಣರೂಪಿ ಕಾಂಗ್ರೆಸ್  ಸರಕಾರದ ಪಾಪದ ಕೊಡ ತುಂಬಿದೆ ಎಂದಿರುವ ಅವರು; ವಿನಾಶಕಾಲೇ ವಿಪರೀತ ಬುದ್ಧಿ! ವಿನಾಶಕಾಲೇ ವಿಪರೀತ ಆಸೆ!! ಎಂದು ಸರಕಾರಕ್ಕೆ ಕುಟುಕಿದ್ದಾರೆ.

RELATED ARTICLES
- Advertisment -
Google search engine

Most Popular