ಪಿರಿಯಾಪಟ್ಟಣ: ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ 8ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ನಡೆಯಿತು. ಆಯುಷ್ ವೈದ್ಯಾಧಿಕಾರಿ ಡಾ.ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದ ವೈದ್ಯ ಪದ್ಧತಿ ಮನುಕುಲದ ಕಲ್ಯಾಣಕ್ಕಾಗಿ ಅವತರಿಸಿದೆ.
ಆಯುರ್ವೇದ ಚಿಕಿತ್ಸಾ ಪದ್ದತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯದಿಂದ ದೀರ್ಘ ಆಯಸ್ಸ ಹೊಂದಲು ಸಹಕಾರಿಯಾಗುತ್ತದೆ. ಆಲೋಪತಿ ಔಷಧ ಪದ್ದತಿಯಿಂದ ತ್ವರಿತವಾಗಿ ಗುಣಮುಖರಾದರೂ ನಮ್ಮ ಆರೋಗ್ಯದ ಮೇಲೆ ಕೆಲ ಸಂದರ್ಭ ಅಡ್ಡ ಪರಿಣಾಮ ಸಹ ಬೀರಬಹುದು ಆದರೆ ಆಯುರ್ವೇದ ಚಿಕಿತ್ಸಾ ಕ್ರಮದಿಂದ ನಿಧಾನಗತಿಯಲ್ಲಿ ದೇಹದ ಮೇಲೆ ಪರಿಣಾಮ ಬೀರಿ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸಿಡಿಪಿಓ ಡಾ.ಮಮತಾ ಅವರು ಮಾತನಾಡಿ ಆಯುರ್ವೇದ ಚಿಕಿತ್ಸೆಯ ಮೂಲ ಮನೆಮದ್ದಾಗಿದೆ. ಪ್ರಕೃತಿದತ್ತವಾಗಿ ಸಿಗುವ ಸೊಪ್ಪು ತರಕಾರಿ ಹಣ್ಣು ಹೆಚ್ಚಾಗಿ ಉಪಯೋಗಿಸುವುದರಿಂದ ಉತ್ತಮ ಆರೋಗ್ಯ ಮತ್ತು ಆಯಸ್ಸು ವೃದ್ಧಿ ಮಾಡಿಕೊಳ್ಳಬಹುದು ಪುರಾತನ ಕಾಲದಲ್ಲಿ ಆಯುರ್ವೇದ ಪದ್ದತಿ ಅಳವಡಿಸಿಕೊಂಡು ದೇಹಕ್ಕೆ ಉತ್ತಮ ಚಿಕಿತ್ಸಾ ವಿಧಾನವನ್ನು ತೋರಿಸಿಕೊಟ್ಟಿದ್ದರು ಎಂದರು. ಈ ಸಂದರ್ಭ ಮುಖಂಡ ರಾಜಣ್ಣ, ಆಶಾ ಮಹದೇವರಾವ್, ಹಾಗೂ ಆಯುಷ್ ಅಧಿಕಾರಿಗಳು ಸಿಬ್ಬಂದಿ ಇದ್ದರು.