ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲೂಕಿನ ನಾಗರಹೊಳೆ ಅಭಯಾರಣ್ಯದ ಅಣ್ಣೂರು ಗುರುವಾಯನ ಕೆರೆ ಕೇಂದ್ರದ ಸಮೀಪ ಮತ್ತೊಂದು ಕಾಡಾನೆಯನ್ನು ಅರವಳಿಕೆ ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಕಳೆದ 10 ದಿನಗಳ ಹಿಂದೆ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಆನೆ ತುಳಿತಕ್ಕೆ ಆದಿವಾಸಿ ವ್ಯಕ್ತಿಯೋರ್ವ ಮೃತಪಟ್ಟ ಹಿನ್ನೆಲೆ ಆದಿವಾಸಿಗಳು ಆನೆಯನ್ನ ಸೆರೆ ಹಿಡಿಯುವಂತೆ ಪಟ್ಟು ಹಿಡಿದಿದ್ದರು.
ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಾಚರಣೆಯನ್ನು ಆರಂಭಿಸಿದ್ದರು.
ಕಾರ್ಯಾಚರಣೆಯಲ್ಲಿ ದಸರಾ ಆನೆಗಳಾದ ಅಶ್ವತ್ಥಾಮ, ಮಹಾರಾಷ್ಟ್ರ ಭೀಮ, ಕರ್ನಾಟಕ ಭೀಮ, ಹರ್ಷ, ಅಭಿಮನ್ಯು, ಮಹೇಂದ್ರ ಸೇರಿದಂತೆ 5 ಆನೆಗಳ ಸಹಾಯದಿಂದ ಡಿ ಎಫ್ ಓ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಸತತ ಆರು ದಿನಗಳ ಕಾರ್ಯಾಚರಣೆ ನಂತರ ಬೃಹದಾಕಾರದ ಕಾಡಾನೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಈ ಆನೆಗೆ 50 ರಿಂದ 55 ವರ್ಷ ವಯಸ್ಸಾಗಿದ್ದು ಮತ್ತಿಗೋಡು ಅರಣ್ಯ ಶಿಬಿರಕ್ಕೆ ಪಳಗಿಸಲು ಬಿಡಲಾಗಿದೆ.
ಅದೇ ರೀತಿ ಮತ್ತೆ ಕಾರ್ಯಾಚರಣೆಯನ್ನು ಮುಂದುವರಿಸಿದ ಅರಣ್ಯ ಸಿಬ್ಬಂದಿಗಳು ಮತ್ತೊಂದು ಕಾಡಾನೆಯನ್ನ ಗುರುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ 6:00 ಸಮಯದಲ್ಲಿ ಕಾಡಾನೆಗೆ ಅರವಳಿಕೆ ನೀಡಿ ಸೆರೆಹಿಡಿದಿದ್ದಾರೆ.
ಸೆರೆಹಿಡಿದ ಆನೆಯನ್ನು ಎಚ್.ಡಿ. ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಬಳ್ಳೆ ಆನೆ ಶಿಬಿರಕ್ಕೆ ಕರೆದೊಯ್ಯಲಾಗಿದ್ದು ಆನೆಯನ್ನು ಪಳಗಿಸುವರೋ ಅಥವಾ ಕಾಡಿಗೆ ಬಿಡುವರೋ ಇನ್ನು ತಿಳಿದು ಬಂದಿಲ್ಲ.
ಮನುಷ್ಯನನ್ನು ತುಳಿದು ಸಾಯಿಸಿರುವ ಆನೆ ಇವುಗಳಲ್ಲ, ಪುಂಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಇವುಗಳನ್ನು ಸೆರೆ ಹಿಡಿಯಲಾಗಿದೆ, ಮನುಷ್ಯನನ್ನು ತುಳಿದು ಸಾಯಿಸಿದ ಆನೆಯನ್ನು ಹಿಡಿಯುವವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು DFO ಹರ್ಷಕುಮಾರ್ ತಿಳಿಸಿದ್ದಾರೆ
ಆರ್ ಎಫ್ ಓ ಅಭಿಷೇಕ್ DRF ಚಂದ್ರೇಶ್ , ಸಚಿನ್ ,ಡಾ. ರಮೇಶ್, ಅರಣ್ಯ ಸಿಬ್ಬಂದಿ ಹರೀಶ್, ಮಹೇಶ್ ,ಅರಣ್ಯ ಗಸ್ತು ಪಾಲಕರು ಕಾರ್ಯಚರಣೆಯಲ್ಲಿ ಇದ್ದರು.