ಚಿತ್ರದುರ್ಗ : ಚಿತ್ರದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದಾವಣಗೆರೆಯಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಜಯಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಬರುವ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಮಕ್ಕಳಿಗೆ ಶುಭ ಕೋರಲು ವಿ.ಪಿ. ಬಡಾವಣೆಯ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿ, ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ೧೪ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಬೆಂಗಳೂರು ವಿಭಾಗಮಟ್ಟ ಹಾಗೂ ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ನಲ್ಲಿ ಚಿತ್ರದುರ್ಗ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಂತಿಮವಾಗಿ ಚಿತ್ರದುರ್ಗ ಜಿಲ್ಲೆಯ ೯ ಕ್ರೀಡಾಪಟುಗಳು ಡಿಸೆಂಬರ್ ೨ನೇ ವಾರದಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ನಗರದ ವಿ.ಪಿ. ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಜ್ವಲ್.ಎನ್, ದಿಗಂತ್‌ಕುಮಾರ್.ಎನ್, ಆದೀಶ್.ಎಸ್, ಪುಷ್ಪವತಿ.ಎಸ್, ಚಿನ್ಮೂಲಾದ್ರಿ ಪ್ರೌಢಶಾಲೆಯ ತೇಜಸ್ವಿನಿ.ಎಸ್, ಮಂಜುನಾಥ.ಆರ್, ಮೊಳಕಾಲ್ಮೂರಿನ ಕಿತ್ತೂರುರಾಣಿ ಚನ್ನಮ್ಮ ಶಾಲೆಯ ಸುನಿತ.ಡಿ.ಎಂ, ಪಲ್ಲವಿ, ಚಳ್ಳಕೆರೆ ಮೊರಾರ್ಜಿ ದೇಸಾಯಿ ಶಾಲೆಯ ಸುನೀಲ್.ಎ ಆಯ್ಕೆಯಾಗಿದ್ದು, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೆ.ಹೆಚ್.ಶಿವರಾಂ ಬಾಲಕರ ವಿಭಾಗದ ರಾಜ್ಯ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ ಎಂದರು.
ಜಿಲ್ಲೆ ಮತ್ತು ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಇವರು ಮಾದರಿಯಾಗಿದ್ದಾರೆ. ೨೨ ವರ್ಷಗಳಿಂದ ಸತತವಾಗಿ ಹ್ಯಾಂಡ್‌ಬಾಲ್‌ನಲ್ಲಿ ಒಂದಲ್ಲಾ ಒಂದು ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಜಿಲ್ಲೆಯ ಕ್ರೀಡಾಪಟುಗಳು ಆಯ್ಕೆಯಾಗುತ್ತಿರುವುದು ಇವರ ಪರಿಶ್ರಮಕ್ಕೆ ಒಂದು ಉದಾಹರಣೆ. ಈ ಅದ್ಬುತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ, ಸಹಕರಿಸಿದ ಪೋಷಕರಿಗೆ ಶಾಲೆಯ ಶಿಕ್ಷಕರಿಗೆ ಚಿತ್ರದುರ್ಗ ಜಿಲ್ಲೆಯ ಸಮಸ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಹಾಗೆಯೇ ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿಯೂ ಸಹ ಅತ್ಯುತ್ತಮ ಸಾಧನೆ ಮೂಡಿ ಬರಲಿ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಶುಭ ಹಾರೈಸಿದ್ದಾರೆ.
ಕಳೆದ ಬಾರಿ ೧೪ ಮತ್ತು ೧೭ ವರ್ಷದ ವಯೋಮಿತ ಬಾಲಕ ಮತ್ತು ಬಾಲಕಿಯರ ೪ ವಿಭಾಗದಲ್ಲಿ ಚಾಂಪಿಯನ್ ಆಗಿ ೧೪ ಜನ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್‌ಗೆ ಆಯ್ಕೆಯಾಗಿದ್ದು ಗಮನಾರ್ಹವಾಗಿದೆ. ಹ್ಯಾಂಡ್‌ಬಾಲ್ ವಿಭಾಗದಿಂದ ೧೮ ಕ್ರೀಡಾಪಟುಗಳು ತಲಾ ರೂ.೦೧ ಲಕ್ಷ ಕ್ರೀಡಾ ವಿದ್ಯಾರ್ಥಿವೇತನ ಪಡೆದಿದ್ದು, ಈ ಬಾರಿ ೧೨ ಕ್ರೀಡಾಪಟು ತಲಾ ರೂ.೦೧ ಲಕ್ಷಗಳನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪಡೆಯಲು ಅರ್ಹರಾಗಿರುತ್ತಾರೆ.