ಮೈಸೂರು: ನಿಜದನಿ ಪತ್ರಿಕೆ ಸಂಪಾದಕ ಶಾಂತರಾಜು ಹಾಗೂ ಹಿರಿಯ ಪತ್ರಿಕಾ ವಿತರಕರಾದ ಪೇಪರ್ ಸುಬ್ಬಣ್ಣ ಅವರ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಭಾವಪೂರ್ಣ ನಮನ ಸಲ್ಲಿಸಲಾಯಿತು. ನಗರದ ಪತ್ರಕರ್ತರ ಭವನದಲ್ಲಿ ಶಾಂತರಾಜು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅನಂತರ ಪೇಪರ್ ಸುಬ್ಬಣ್ಣ ಅವರ ನಿಧನಕ್ಕೆ ಐದು ನಿಮಿಷ ಮೌನಾಚರಣೆಯ ಗೌರವ ಸಲ್ಲಿಸಿ ನಮನ ಸಲ್ಲಿಸಿದರು.
ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಮಾತನಾಡಿ, ಶಾಂತರಾಜು ಅವರ ನಿಧನಕ್ಕೆ ಎರಡು ದಿನ ಮುಂಚೆ ಅವರನ್ನು ಭೇಟಿ ಮಾಡಿ ೪೦ನಿಮಿಷಕ್ಕೂ ಹೆಚ್ಚು ಮಾತನಾಡಿದ್ದೇ ಅಂದೇ ಅವರ ಮೊಗದಲ್ಲಿ ಹೊಸ ತೇಜಸ್ಸು ಕಂಡಿದ್ದರು. ಅವರ ನಿಧನ ಸುದ್ದಿ ಕೇಳಿ ಮನಸ್ಸಿಗೆ ನೋವುಂಟಾಯಿತು. ಅವರ ನೆನಪು ಹಾಗೇ ಉಳಿಯಲಿ ಎಂಬ ಕಾರಣಕ್ಕೆ ಅವರ ಅಂತಿಮ ದರ್ಶನಕ್ಕೂ ಹೋಗಲಿಲ್ಲ. ಇಂದು ಪತ್ರಕರ್ತ ಆರೋಗ್ಯ ಕಾಳಜಿ ಇಲ್ಲವಾಗಿದೆ. ಅವರ ಕುಟುಂಬಸ್ಥರಿಗೆ ಆದ್ಯತೆ ನೀಡಲು ಆಗುತ್ತಿಲ್ಲವೆಂದು ವಿಷಾಧಿಸಿದರು.
ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಹಳಷ್ಟು ಮಂದಿ ಪತ್ರಕರ್ತರು ಶೋಷಿತ ಸಮುದಾಯದಿಂದ ಬಂದವರು ಪತ್ರಕರ್ತರಾಗಿದ್ದಾರೆ. ಆದರೆ, ಈಗ ನಾವು ಶೋಷಿತ ಸಮುದಾಯದಿಂದ ಬಂದವರು ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅಂತಹವರಿಗೆ ದಲಿತ ವೇಲ್‌ಫೇರ್ ಟ್ರಸ್ಟ್ ಸ್ಥಾಪಿಸಿ ಸಂಘಟನೆಗೆ ಆದ್ಯತೆ ನೀಡಿದ್ದರು. ಮಹಿಳೆಯರು, ಬಡವರು ಹಾಗೂ ರೈತರ ಪರವಾಗಿ ದನಿ ಎತ್ತಿದ್ದರು.ಇವರ ನಿಧನ ಪತ್ರಿಕೋದ್ಯಮಕ್ಕೆ ಮಾತ್ರವಲ್ಲ ಸಮಾಜ ಹಾಗೂ ಶೋಷಿತ ಸಮುದಾಯಕ್ಕೂ ನಷ್ಟ ಎಂದು ಹೇಳಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಆಶೋಕಪುರಂನಲ್ಲಿ ನಾನು ಶಾಂತರಾಜು ಅವರು ಹುಟ್ಟಿದೆವು. ಐವತ್ತು ವರ್ಷಗಳ ಹಿಂದೆ ಯುವ ಜನಸಂಘದಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಮೂಲಕ ಚಳವಳಿ ಹುಟ್ಟು ಹಾಕಿದ್ದರು. ಒಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಟಿ.ನರಸೀಪುರದಿಂದ ನಿಂತೂ ಸೋಲುತ್ತಾರೆ. ಅನಂತರ ತಮ್ಮ ಹೋರಾಟದ ಹಾದಿಯನ್ನು ಬದಲಾಯಿಸಿ ದಲಿತ ಜಾಗೃತಿ ಸಂಘ ಸ್ಥಾಪಿಸಿ ದಲಿತರಿಗೆ ಎಲ್ಲೇ ಅನ್ಯಾಯವಾದರೂ ಅದರ ಬಗ್ಗೆ ಮಾತನಾಡಿ ಹೋರಾಟ ಮಾಡುತ್ತಿದ್ದರು. ರಾಜ್ಯ ದಲಿತ ವೇಲ್‌ಫೇರ್ ಟ್ರಸ್ಟ್ ಸ್ಥಾಪಿಸಿ ರಾಜ್ಯದಲ್ಲೇ ಸಂಘಟನೆ ಮಾಡಿದ್ದಾರೆ. ಮಾದ್ಯಮ ಕ್ಷೇತ್ರದಲ್ಲಿಯೂ ತಮ್ಮದೇ ಆದ ಸೇವೆ ಮಾಡಿದ್ದಾರೆ. ನೂರು ವರ್ಷಕ್ಕೆ ಆಗುವಷ್ಟು ಸಾಧನೆ ಮಾಡಿದ್ದು, ಅವರ ಆಶಯವನ್ನು ಸಂಘಟನೆ ಮುಂದುವರೆಸಲಿದೆ ಎಂದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ, ಸಾಹಿತಿ ಬನ್ನೂರು ಕೆ.ರಾಜು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ರಾಘವೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯೆ ಮಾಚಮ್ಮ, ಹಿರಿಯ ಛಾಯಾಗ್ರಾಹಕ ಪಗ್ರತಿ ಗೋಪಾಲಕೃಷ್ಣ,ಬಸವಣ್ಣ, ರೇವಣ್ಣ ಲಕ್ಷ್ಮಣ್ ಹೊಸಕೋಟೆ, ಇನ್ನಿತರರು ಇದ್ದರು.