ಮೈಸೂರು : ಆಹಾರ ಅರಸಿ ಬಂದು ತೋಟಕ್ಕೆ ಹಾಕಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ರಕ್ಷಣೆ ಮಾಡಿರುವ ಘಟನೆ ಹೆಚ್ ಡಿ. ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮದ ತೋಟವೊಂದರಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಣೆ ಮಾಡಿದ್ದಾರೆ.
ಹೆಚ್.ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಆರ್ಮುಗಂ ಎಂಬುವರು ತಮ್ಮ ತೋಟಕ್ಕೆ ಹಾಕಿದ್ದ ತಂತಿ ಬೇಲಿಗೆ ಚಿರತೆ ಸಿಲುಕಿಕೊಂಡಿತ್ತು. ಈ ವೇಳೆ ಎಂದಿನಂತೆ ತೋಟದ ಕೆಲಸಕ್ಕೆ ಆಗಮಿಸಿದ ಕೂಲಿ ಕಾರ್ಮಿಕರು ಬೇಲಿಯಲ್ಲಿ ಚಿರತೆ ಸಿಲುಕಿರುವುದನ್ನು ಕಂಡು ಭಯಭೀತರಾಗಿದ್ದಾರೆ. ಬಳಿಕ ತಕ್ಷಣ ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದು, ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ತಜ್ಞರಿಂದ ಚಿರತೆಗೆ ಚುಚ್ಚುಮದ್ದು ನೀಡಿ ಅದನ್ನು ಸೆರೆ ಹಿಡಿದಿದ್ದಾರೆ. ಸೆರೆ ಸಿಕ್ಕ ಚಿರತೆ ಆರೋಗ್ಯವಾಗಿದೆ. ತಂತಿ ಬೇಲಿಗೆ ಸಿಲುಕಿದ್ದ ಕಾರಣ ಚಿರತೆಯ ಕಾಲಿಗೆ ಗಾಯವಾಗಿದೆ. ಚಿಕಿತ್ಸೆ ನೀಡಿ ಚೇತರಿಸಿಕೊಂಡ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.