ತುಮಕೂರು: ನ.೧೫ ನೇ ಕ್ಕೆ ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದೇನೆ ಎಂದು ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರಾದ ಜೆ.ಪಿ ನಡ್ಡಾ, ಅಮಿತ್ ಶಾ, ಸಂತೋಷ್ ಸೇರಿದಂತೆ ಎಲ್ಲರೂ ಚರ್ಚೆ ಮಾಡಿ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆಯಲು ಬಂದಿದ್ದೇನೆ. ತಂದೆ ಯಡಿಯೂರಪ್ಪನವರು ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಶಿವಕುಮಾರ ಸ್ಚಾಮೀಜಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು ಎಂದರು.
ನಳಿನ್ ಕುಮಾರ್ ಕಟೀಲ್ ಅವರು ಯಶಸ್ವಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದ್ರು. ನಮ್ಮ ಪಕ್ಷದ ಹಿರಿಯ ಮುಖಂಡರಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಈಶ್ವರಪ್ಪ, ಸದಾನಂದ ಗೌಡ, ಕಾರಜೋಳ, ಯತ್ನಾಳ್, ಸೋಮಣ್ಣ ಸೇರಿದಂತೆ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡುತ್ತಿದ್ದೇನೆ. ರಾಷ್ಟ್ರೀಯ ನಾಯಕರಿಗೆ ಚುನಾವಣೆ ಇರುವುದರಿಂದ ಬರುತ್ತಿಲ್ಲ. ಕೇಂದ್ರದ ವೀಕ್ಷಕರು ಬರಲಿದ್ದಾರೆ. ಶುಕ್ರವಾರದೊಳಗೆ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಕರೆಯಲಿದ್ದೇವೆ ಎಂದು ತಿಳಿಸಿದರು.