Saturday, April 19, 2025
Google search engine

Homeರಾಜ್ಯಸುದ್ದಿಜಾಲರೈತರಿಗೆ ಪರಿಹಾರ ಹಣ ಬಿಡುಗಡೆಗೊಳಿಸದಿದ್ದರೆ ಬೆಳಗಾವಿ ಅಧಿವೇಶನ ತಡೆದು ಜಿ.ಟಿ ದೇವೇಗೌಡ ಧರಣಿ

ರೈತರಿಗೆ ಪರಿಹಾರ ಹಣ ಬಿಡುಗಡೆಗೊಳಿಸದಿದ್ದರೆ ಬೆಳಗಾವಿ ಅಧಿವೇಶನ ತಡೆದು ಜಿ.ಟಿ ದೇವೇಗೌಡ ಧರಣಿ

ಮೈಸೂರು: ಸರ್ಕಾರ ಕೂಡಲೇ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಹಣ ಬಿಡುಗಡೆಗೊಳಿಸದಿದ್ದರೆ ಶಾಸಕರೆಲ್ಲರೂ ಸೇರಿಕೊಂಡು ಡಿ.೪ರಂದು ಬೆಳಗಾವಿ ಅಧಿವೇಶನ ತಡೆದು ಧರಣಿ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಎಚ್ಚರಿಸಿದರು. ಮೈಸೂರಿನ ಹುಣಸೂರಿನಲ್ಲಿ ತಮ್ಮ ನೇತೃತ್ವದ ಜೆಡಿಎಸ್ ನಾಯಕರೊಂದಿಗೆ ಬರ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ೩,೯೭,೮೭೯ ಹೆಕ್ಟೇರ್ ವಿಸ್ತೀರ್ಣ ವ್ಯವಸಾಯ ಪ್ರದೇಶವಿದೆ. ಈ ಸಾಲಿನಲ್ಲಿ ೩,೭೦,೨೧೧ ಹೆಕ್ಟೇರ್ (ಶೇ. ೯೩)ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈ ಬಾರಿಯ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ೮೨,೬೬೦.೭೫ ಹೆಕ್ಟೇರ್ ಪ್ರದೇಶದಲ್ಲಿ, ಒಟ್ಟು ೧,೪೯,೨೯೬ ರೈತರಿಗೆ ಅಂದಾಜು ೭೦ ಕೋಟಿ ರೂ. ನಷ್ಟು ಅನಾವೃಷ್ಟಿಯಿಂದ ಬೆಳೆ ನಷ್ಟವಾಗಿರುತ್ತದೆ ಎಂದು ಸರ್ಕಾರದಿಂದ ವರದಿ ನೀಡಲಾಗಿದೆ. ಆದರೆ, ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೨ ಲಕ್ಷ ಕೋಟಿ ರೂ. ಬೆಳೆ ನಷ್ಟವಾಗಿದೆ. ಆದರೆ, ಈವರೆಗೆ ಸರ್ಕಾರ ಬೆಳೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ರೈತರು ಬಡ್ಡಿ ಕಟ್ಟಲು ಸಾಧ್ಯವಾಗದೇ ಅನಾಥರಾಗಿದ್ದಾರೆ ಎಂದರು.

ರಾಜ್ಯ ಸರ್ಕಾರ ವಿದ್ಯುತ್ ಸಮಸ್ಯೆ ಬಗೆಹರಿಸಲು ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿಯೂ ಕೇಂದ್ರದಿಂದ ಬರ ಪರಿಹಾರ ತಂದಿದ್ದರು. ರಾಜ್ಯಾದ್ಯಂತ ೩೩ ಸಾವಿರ ಕೋಟಿ ರೂ. ಬೆಳೆ ಹಾನಿಯಾಗಿರುವುದಾಗಿ ಗುರುತಿಸಲಾಗಿದೆ. ಆದರೆ, ಈವರೆಗೆ ಪರಿಹಾರ ನೀಡಿಲ್ಲ. ರೈತರಿಗೆ ಹಗಲಿನ ವೇಳೆ ವಿದ್ಯುತ್ ನೀಡದೇ ರಾತ್ರಿ ವೇಳೆ ಕೊಡುತ್ತಿರುವುದರಿಂದ ರಾತ್ರಿ ವೇಳೆ ಹೊಲ ಗದ್ದೆಗಳಲ್ಲಿ ದುಡಿಯುವಂತಾಗಿದೆ. ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರ ಪಾಲಿಗೆ ಮರಣ ಶಾಸನ ಬರೆದಿದೆ. ರೈತರು ಕೊಳವೆ ಬಾವಿ ಕೊರೆಸಿಕೊಳ್ಳಲು ಉಚಿತವಾಗಿ ವಿದ್ಯುತ್ ಸಂಪರ್ಕ ಸೇರಿದಂತೆ ೩ ಲಕ್ಷ ರೂ. ವೆಚ್ಚದಲ್ಲಿ ಐಪಿ ಸೆಟ್ ಹಾಕಿಸಿಕೊಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಈ ಯೋಜನೆಯನ್ನೇ ರದ್ದುಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾ.ರಾ. ಮಹೇಶ್ ಮಾತನಾಡಿ, ಬರ ಪರಿಹಾರಕ್ಕೆ ಮೀಸಲಾದ ಹಣ ಜಿಲ್ಲಾಧಿಕಾರಿಗಳ ಬಳಿ ಇದ್ದು, ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು. ಸರ್ಕಾರ ಇತರ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ರೈತರ ಸಂಕಷ್ಟಕ್ಕೆ ಧಾವಿಸಬೇಕು. ಸಿಎಂ ಜಿಲ್ಲೆಯಲ್ಲಿಯೇ ಬರ ಪರಿಹಾರ ಕಾರ್ಯ ಸ್ಥಗಿತಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ನಿಷ್ಕ್ರಿಯರಾಗಿದ್ದಾರೆ. ಕೂಡಲೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ ಜನರ ಕಷ್ಟ ಪರಿಹರಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಹರೀಶ್ ಗೌಡ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಶೇ.೧೮ರಷ್ಟು ಮಳೆ ಕಡಿಮೆಯಾಗಿದೆ. ಇದರಿಂದ ಬೆಳೆ ನಷ್ಟವಾಗಿರುತ್ತದೆ. ಇದರೊಂದಿಗೆ ವಿದ್ಯುತ್ ಕಣ್ಣುಮುಚ್ಚಾಲೆಯಿಂದ ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸರಿಯಾಗಿ ಪೂರೈಕೆಯಾಗದೆ ಬಹಳ ತೊಂದೆಯಾಗಿದೆ. ಕೈಗೆ ಬಂದ ಬೆಳೆ ಒಣಗಿರುವುದರಿಂದ ರೈತರು ಸಾಲದ ಸೂಲದಲ್ಲಿ ಮತ್ತೊಮ್ಮೆ ಸಿಲುಕಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular