ಹೈದರಾಬಾದ್: ದೀಪಾವಳಿ ಹಬ್ಬದಿನದಂದೇ ಹೈದರಾಬಾದ್‌ನಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಬಜಾರ್‌ಘಾಟ್‌ನ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು ನಾಲ್ಕು ಮಹಡಿಗಳಿಗೆ ವ್ಯಾಪಿಸಿದೆ. ಈ ಅವಘಡದಲ್ಲಿ ದಟ್ಟ ಹೊಗೆಯಿಂದಾಗಿ ಇದುವರೆಗೆ ೯ ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ, ಅಗ್ನಿಶಾಮಕ ಸಿಬ್ಬಂದಿ ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮೃತಪಟ್ಟವರಲ್ಲಿ ನಾಲ್ಕು ದಿನದ ಮಗು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ.
ಕಟ್ಟಡದ ನೆಲಮಹಡಿಯಲ್ಲಿ ಗ್ಯಾರೇಜ್ ಇದ್ದ ಕಾರಣ ಕಾರನ್ನು ದುರಸ್ತಿ ಮಾಡುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಅಲ್ಲಿ ಡೀಸೆಲ್ ಹಾಗೂ ಕೆಮಿಕಲ್ ಡ್ರಮ್ ಗಳಿದ್ದು, ಬೆಂಕಿ ಹೊತ್ತಿಕೊಂಡಿದ್ದರಿಂದ ಬೆಂಕಿಯ ಕೆನ್ನಾಲಿಗೆ ಕಟ್ಟಡದ ಸುತ್ತಲೂ ವ್ಯಾಪಿಸಿದೆ. ಇದರಿಂದ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿದ್ದವರು ಭಯಭೀತರಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಗ್ಯಾರೇಜ್‌ನಲ್ಲಿದ್ದ ಉಳಿದ ರಾಸಾಯನಿಕ ಕ್ಯಾನ್‌ಗಳನ್ನು ಹೊರ ತಂದಿದ್ದಾರೆ. ಅಪಘಾತದಿಂದಾಗಿ ಗ್ಯಾರೇಜ್‌ನಲ್ಲಿದ್ದ ಹಲವು ವಾಹನಗಳು ಸುಟ್ಟು ಕರಕಲಾಗಿವೆ.
ಬಜಾರ್‌ಘಾಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತರ ಕುಟುಂಬಸ್ಥರು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ಗುರುತಿಸಲಾಗಿದೆ. ಘಟನೆಯಲ್ಲಿ ೪ ದಿನದ ಮಗುವೂ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.