ಉಡುಪಿ : ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಪತ್ತೆಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದು, ಇದಕ್ಕಾಗಿ ಐದು ತಂಡಗಳನ್ನು ರಚನೆ ಮಾಡಲಾಗಿದೆ.
ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ರಕ್ತದೋಕುಳಿಯೇ ಹರಿದಿದೆ. ಹಂತಕನೊಬ್ಬ ಮನೆಯೊಂದಕ್ಕೆ ನುಗ್ಗಿ, ಓರ್ವ ಮಹಿಳೆ ಆಕೆಯ ೧೧ ವರ್ಷದ ಮಗ, ಇಬ್ಬರು ಹೆಣ್ಣು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಹಸೀನಾ(೪೬), ಅಫ್ನಾನ್(೨೩), ಅಯ್ನಾಝ್(೨೧) ಆಸೀಂ(೧೨) ಮೃತರು. ಕೊಲೆಯಾದ ಮಹಿಳೆ ಹಸೀನಾಳ ಅತ್ತೆ ಮೇಲೂ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ. ಹಂತಕ ನಾಲ್ವರಿಗೂ ಒಂದೇ ರೀತಿಯಲ್ಲಿ ಚೂರಿ ಇರಿದು ಹತ್ಯೆ ಮಾಡಿರೋದು ಪತ್ತೆಯಾಗಿದೆ. ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ. ಪರಿಚಯಸ್ಥನೇ ಕೊಲೆ ಮಾಡಿದ್ದಾನಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆಯಾದ ಹಸೀನಾ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಪುತ್ರಿ ಅಫ್ನಾನ್ ಬೆಂಗಳೂರಿನಲ್ಲಿ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಹಬ್ಬದ ರಜೆ ಕಾರಣಕ್ಕೆ ನಿನ್ನೆಯಷ್ಟೇ ಊರಿಗೆ ಬಂದಿದ್ದಳು. ಹೀಗಾಗಿ ಅಫ್ನಾನ್‌ನನ್ನು ಹುಡುಕಿಕೊಂಡು ಬೆಂಗಳೂರಿನಿಂದ ಹಂತಕ ಬಂದಿದ್ದನಾ? ಒಬ್ಬಳ ಮೇಲಿನ ದ್ವೇಷಕ್ಕೆ ಉಳಿದ ಮೂವರನ್ನ ಕೊಂದು ಹಾಕಿದ್ದಾನಾ ಅನ್ನುವ ಅನುಮಾನ ಇದ್ದು, ತನಿಖೆಯಿಂದಷ್ಟೇ ಸತ್ಯಾಂಶ ಬಯಲಾಗಬೇಕಿದೆ.
ಆರೋಪಿ ಆಟೋದಲ್ಲಿ ಬಂದಿದ್ದ ವಿಡಿಯೋ ನಿನ್ನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಆತ ಬೈಕಿನಲ್ಲಿ ಡ್ರಾಪ್ ಪಡೆದುಕೊಂಡು ಬಂದಿದ್ದ ದೃಶ್ಯವೂ ಲಭ್ಯವಾಗಿದೆ. ಸಂತೆಕಟ್ಟೆ ಜಂಕ್ಷನ್‌ವರೆಗೆ ಆತ ಬೇರೋಬ್ಬರ ಬೈಕಿನಲ್ಲಿ ಡ್ರಾಪ್ ಪಡೆದುಕೊಂಡಿದ್ದ. ನಿನ್ನೆ ಅನುಮಾನಾಸ್ಪದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೇ, ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟು ಕಳುಹಿಸಿದ್ದಾರೆ.