ನಾಗಮಂಗಲ: ಚಾಲಕನೊಬ್ಬ ಗಾಂಜಾ ನಶೆಯಲ್ಲಿ ಜೆಸಿಬಿ ಯಂತ್ರವನ್ನು ಚಲಾಯಿಸಿದ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಗೋಬಿ, ಪಾನಿಪುರಿ ಅಂಗಡಿಗಳು ಧ್ವಂಸವಾಗಿ, ಬಾಲಕಿ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಘಟನೆ ತಾಲೂಕಿನ ಬೆಳ್ಳೂರಿನಲ್ಲಿ ನಡೆದಿದೆ.
ಬಿಹಾರ ಮೂಲದ ರಾಜ್ ಕುಮಾರ್ ಗಾಂಜಾ ನಶೆಯಲ್ಲಿ ಜೆಸಿಬಿ ಚಲಾಯಿಸಿದ ಚಾಲಕ. ಕುಣಿಗಲ್ ಕಡೆಯಿಂದ ನಾಗಮಂಗಲಕ್ಕೆ ಜೆಸಿಬಿಯಲ್ಲಿ ಬಂದಿದ್ದ ರಾಜ್ ಕುಮಾರ್ ನಾಗಮಂಗಲದ ನೆಲ್ಲಿಗೆರೆ ಬಳಿ ಮೊದಲು ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ನಂತರ ಬೆಳ್ಳೂರು ಸಂತೆಗೆ ಜೆಸಿಬಿ ನುಗ್ಗಿಸಿ, ಸಂತೆಯಲ್ಲಿ ಮನಸೋ ಇಚ್ಚೆ ಜೆಸಿಬಿ ಓಡಿಸಿದ್ದಾನೆ. ನಂತರ ಬೆಳ್ಳೂರು ಪಟ್ಟಣದ ಬೀದಿಗಳಲ್ಲಿ ಯದ್ವಾ ತದ್ವ ಓಡಿಸಿದ್ದಾನೆ. ಇದರಿಂದ ಬೀದಿ ಬದಿಯಲ್ಲಿದ್ದ ಗೋಬಿ, ಪಾನಿಪುರಿ ಕೈಗಾರಿಗಳು ಧ್ವಂಸವಾಗಿದ್ದು, ಬಾಲಕಿ ಸೇರಿದಂತೆ ಮೂವರು ಗಾಯಗೊಂಡರು.
ನಂತರ ಸಂತೆಯಲ್ಲಿ ನೆರೆದಿದ್ದ ಸಾರ್ವಜನಿಕರು ಚಾಲಕನ ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬೆಳ್ಳೂರು ಪೊಲೀಸರು ಆಗಮಿಸಿ ಗಾಯಗೊಂಡಿದ್ದ ಜೆಸಿಬಿ ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.