ಬೆಂಗಳೂರು: ದಾಬಸ್‌ಪೇಟೆಯಿಂದ ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೬೪೮ರಲ್ಲಿ ದೊಡ್ಡಬಳ್ಳಾಪುರ ಬಳಿ ನಡೆಯುತ್ತಿದ್ದ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಹೀಗಾಗಿ, ನ. ೧೭ರಿಂದ ದೊಡ್ಡಬಳ್ಳಾಪುರ ಮತ್ತು ನಲ್ಲೂರು ನಡುವಿನ ೩೪.೧೫ ಕಿ.ಮೀ ರಸ್ತೆಗೆ ಹೊಸದಾಗಿ ಟೋಲ್ ಸುಂಕ ವಸೂಲಿ ಆರಂಭಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಟೋಲ್ ಸುಂಕದ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಿಂದ ತಮಿಳುನಾಡಿನ ಹೊಸೂರು ಭಾಗಕ್ಕೆ ತೆರಳುವವರು ಬೆಂಗಳೂರು ನಗರವನ್ನು ಪ್ರವೇಶಿಸದೆ ದಾಬಸ್‌ಪೇಟೆಯಿಂದ ನೇರವಾಗಿ ಹೊಸೂರಿಗೆ ತೆರಳಲು ಈ ಹೆದ್ದಾರಿ ಅವಕಾಶ ಮಾಡಿಕೊಡಲಿದೆ ಎಂದು ಹೇಳಲಾಗಿದೆ. ದಾಬಸ್‌ಪೇಟೆ-ಹೊಸೂರು ಹೆದ್ದಾರಿಯು ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರನ್ನು ತಲುಪಲಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದು, ದೊಡ್ಡಬಳ್ಳಾಪುರ ಬೈಪಾಸ್‌ನಿಂದ ನಲ್ಲೂರು ಗ್ರಾಮದ ವರೆಗಿನ ರಸ್ತೆ ಪೂರ್ಣಗೊಂಡಿದೆ. ಹೀಗಾಗಿ, ಈ ರಸ್ತೆಗೆ ಟೋಲ್ ಸುಂಕ ವಸೂಲಿಗೆ ಪ್ರಾಧಿಕಾರ ಮುಂದಾಗಿದೆ.