ಮಂಡ್ಯ: ಆಸ್ತಿಗಾಗಿ ಪತ್ನಿಯನ್ನೇ ಪತಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ವಿ ವಿ ನಗರ ಬಡಾವಣೆಯಲ್ಲಿ ನಡೆದಿದೆ.
ಎಸ್. ಶೃತಿ (32) ಕೊಲೆಯಾದ ಗೃಹಿಣಿ. ಪತಿ ಟಿ.ಎನ್. ಸೋಮಶೇಖರ್ (41) ಆರೋಪಿ.
ಪತ್ನಿಯ ಹೆಸರಿನಲ್ಲಿದ್ದ ಕೋಟ್ಯಾಂತರ ರೂ.ಗಳ ಆಸ್ತಿಯನ್ನ ಸಂಪೂರ್ಣವಾಗಿ ಮಾರಿ ತನ್ನದಾಗಿಸಿಕೊಳ್ಳುಲು ಮುಂದಾಗಿದ್ದು, ಇದಕ್ಕೆ ಒಪ್ಪದ ಪತ್ನಿಯನ್ನು ಮಲಗಿದ್ದ ವೇಳೆ ಮುಖಕ್ಕೆ ದಿಂಬು, ಬೆಡ್ ಶೀಟ್ ನಿಂದ ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಸಹಜ ಸಾವೆಂದು ಬಿಂಬಿಸಲು ಯತ್ನಿಸಿದ್ದ.

ಆಸ್ತಿಯ ವಿಷಯವಾಗಿ ಹಲವು ಬಾರಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಸಂಬಂಧ ಪಂಚಾಯಿತಿಯಲ್ಲಿ ಇದನ್ನು ರಾಜಿ ಮಾಡಿ ಮನೆಗೆ ಕಳುಹಿಸಿದ್ದರೂ ಪುನಃ ಪತ್ನಿಗೆ ಹಿಂಸೆ ನೀಡುತ್ತಿದ್ದ.
ಘಟನೆಯ ನಂತರ ಶೃತಿಯ ಸಂಬಂಧಿ ಪ್ರಕರಣವನ್ನು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಪತಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.