ಉಡುಪಿ: ನೇಜಾರು ಬಳಿ ನಡೆದಿದ್ದ ನಾಲ್ವರ ಕೊಲೆ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದೇವೆ. ಹಲವಾರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿ, ಒಬ್ಬನನ್ನು ವಶಕ್ಕೆ ಪಡೆದಿದ್ದೇವೆ ಎಂದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ಬೆಳಗಾವಿ ಜಿಲ್ಲೆಯ ಕುಡುಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರವೀಣ್ ಅರುಣ್ ಚೌಜಲೆ ಎಂಬಾತನನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯಲ್ಲಿ ಆತನೇ ಆರೋಪಿ ಎಂಬುದು ಖಚಿತವಾದರೆ, ಆತನನ್ನು ಬಂಧಿಸಿ, ನ್ಯಾಯಾಲಯದಲ್ಲಿ ಹಾಜರು ಪಡಿಸುತ್ತೇವೆ ಎಂದು ತಿಳಿಸಿದರು.
ಶಂಕಿತ ಆರೋಪಿ ಸಿಆರ್‌ಪಿಎಫ್ ಅಥವಾ ಸಿವಿಲ್ ಪೊಲೀಸ್ ಇಲಾಖೆಯಲ್ಲಿ ಇದ್ದ ಎಂಬ ಮಾತುಗಳಿವೆ. ಆ ಬಗ್ಗೆ ನಿಖರ ಮಾಹಿತಿ ಇಲ್ಲ. ತನಿಖೆಯಲ್ಲಿ ಗೊತ್ತಾಗಬೇಕು ಎಂದು ತಿಳಿಸಿದ್ದಾರೆ. ತಾಂತ್ರಿಕ ವಿಶ್ಲೇಷಣೆ, ಸಿಸಿ ಟಿಸಿ ದೃಶ್ಯಗಳು ಮತ್ತು ಗುಪ್ತಚರ ಮಾಹಿತಿ ಆಧರಿಸಿ ಆತನನ್ನು ವಶಕ್ಕೆ ಪಡೆದಿದ್ದೇವೆ. ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವರದಿ ಬಂದ ಮೇಲೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.