ದಾವಣಗೆರೆ: ಜಿಲ್ಲೆಯಲ್ಲಿ ಯಾವುದೇ ಮಗುವಿಗೆ ಜ್ವರ, ನೆಗಡಿಯಂತಹ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರವೇ ಲಸಿಕೆ ಹಾಗೂ ಸೂಕ್ತ ಚಿಕಿತ್ಸೆಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಮತ್ತು ನವಜಾತ ಶಿಶು ಕಾರ್ಯಕ್ರಮಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೂ ತೆರಳಿ ಜ್ವರ, ನೆಗಡಿಯಂತಹ ಲಕ್ಷಣಗಳು ಕಂಡು ಬಂದ ಮಕ್ಕಳನ್ನು ತಕ್ಷಣ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಬೇಕು, ಹಾಗೂ ನ್ಯೂಮೋನಿಯಾ, ಹೆಚ್.ಐ.ವಿ, ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕುರಿತು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೇ ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಭೆ ನಡೆಸಿ ಜನರಿಗೆ ಜಾಗೃತಿ ಮೂಡಿಸಬೇಕು. ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುವ ಅತಿಸಾರ ಭೇದಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಸಲುವಾಗಿ ಓ.ಆರ್,ಎಸ್ ಮತ್ತು ಝಿಂಕ್ ಮಾತ್ರೆ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಮಕ್ಕಳಿಗೆ ಕೈ ತೊಳೆಯುವುದರ ಮಹತ್ವವನ್ನು ತಿಳಿಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಕುಡಿಯುವ ನೀರಿನ ಟ್ಯಾಂಕರ್‍ಗಳನ್ನು ಕಾಲಾನುಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು ಹಾಗೂ ನೀರು ಸರಾಬರಾಜಗುತ್ತಿರುವ ಪೈಪ್‌ಗಳು ಹಾನಿಯಾದಲ್ಲಿ ಶೀಘ್ರವೇ ಸರಿಪಡಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಬೇಕು.ಜಿಲ್ಲೆಯಲ್ಲಿ ಇಲ್ಲಿಯವರೆಗೆ ೪೫೦೦ ಹೆಚ್.ಐ.ವಿ. ಪ್ರಕರಣಗಳು ವರದಿಯಾಗಿವೆ.
ಹೆಚ್ಚಾಗಿ ಯುವಕರೇ ಈ ಸೋಂಕಿಗೆ ಒಳಗಾಗುತ್ತಿದ್ದು, ಅವರಿಗೆ ಹೆಚ್ಚು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲೆ, ಕಾಲೇಜು, ಹಾಸ್ಟೆಲ್‌ಗಳು ಮತ್ತು ಪಿ.ಜಿ ಗಳಲ್ಲಿ ತಿಂಗಳಿಗೆ ಒಂದು ಬಾರಿಯಾದರೂ ಸೋಂಕಿನ ಹರಡುವಿಕೆ, ಸುರಕ್ಷತೆ ಬಗ್ಗೆ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಬೇಕು. ಎನ್.ಜಿ.ಒಗಳು ಅತ್ಯಂತ ಕ್ರಿಯಾಶೀಲರಾಗಿ ಹೆಚ್.ಐ.ವಿ ಪ್ರಕರಣಗಳನ್ನು ಗುರುತಿಸಿ ಕೌನ್ಸಿಲಿಂಗ್ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ತೀವ್ರ ಅತಿಸಾರ ನಿಯಂತ್ರಣ ಪಾಕ್ಷಿಕ ಕುರಿತ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್ ಷಣ್ಮುಖಪ್ಪ, ಆರ್.ಸಿ.ಹೆಚ್ ಅಧಿಕಾರಿ ರೇಣುಕಾರಾಧ್ಯ ಎ.ಎಂ, ಟಿ.ಬಿ ಅಧಿಕಾರಿ ಡಾ. ಮುರುಳಿಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜ್‌ಕುಮಾರ್ ಮತ್ತು ತಾಲ್ಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.