ಬೆಂಗಳೂರು: ಮಹಿಳೆಯೊಬ್ಬರಿಗೆ ದರ್ಶನ ಮನೆಯ ಸಾಕು ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ.೧೫ ರಂದು ನಟ ದರ್ಶನ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು.
ಮಹಿಳೆ ಮೇಲೆ ದರ್ಶನ್ ಮನೆಯ ಸಾಕು ನಾಯಿ ದಾಳಿ ನಡೆಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ದರ್ಶನ ವಿರುದ್ಧವೂ ದೂರು ದಾಖಲಿಸಿದ್ದರು. ಮಹಿಳೆ ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೨೮೯ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಪೊಲೀಸರು ಸ್ಥಳ ಮಹಜರು ಕೂಡ ನಡೆಸಿದ್ದರು.
ಪ್ರಕರಣದ ಎ೨ ಆರೋಪಿ ಆಗಿರುವ ದರ್ಶನ್ ಅವರಿಗೆ ಆರ್.ಆರ್.ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ನಟ ದರ್ಶನ್ ನ.೧೫ರಂದು ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಕೇವಲ ೧೫ ನಿಮಿಷದಲ್ಲಿ ಹೇಳಿಕೆ ನೀಡಿ ದರ್ಶನ್ ಅವರು ಠಾಣೆಯಿಂದ ಹೊರಬಂದರು. ಹೇಳಿಕೆ ಪ್ರತಿಗೆ ಸಹಿ ಹಾಕಿಸಿಕೊಂಡ ಇನ್ಸ್‌ಪೆಕ್ಟರ್ ವಿಚಾರಣೆ ಮುಗಿಸಿದರು.