ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮಳೆ ಆದಾರಿತ ಸಂಕಷ್ಟ ಸೂತ್ರ ರಚಿಸುವಲ್ಲಿ ಸರ್ಕಾರ ಶೀಘ್ರ ಕ್ರಮ ವಹಿಸಿ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಬೇಕು ಎಂದು ಇಂಜಿನಿಯರ್ ರಾಮಕೃಷ್ಣ(ಕಿಟ್ಟಣ್ಣ) ಅಭಿಪ್ರಾಯಿಸಿದರು. ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಬುಧವಾರ ನಡೆದ ನಲವತ್ತೆರಡನೆ ದಿನದ ಹೋರಾಟದಲ್ಲಿ ಅವರು ಮಾತನಾಡಿ ನೈಸರ್ಗಿಕ ಸಂಪತ್ತುಗಳು ಆಯಾ ಪ್ರದೇಶಕ್ಕೆ ಮೀಸಲಾಗಿದೆ.
ಈ ನಿಟ್ಟಿನಲ್ಲಿ ನಮ್ಮ ಕಾವೇರಿ ನಮ್ಮ ಹಕ್ಕಾಗಿದೆ. ಆದರೆ ೧೫೦ ವರ್ಷಗಳ ಹಿಂದೆ ಹೆಚ್ಚು ಮಳೆ ಆಗುತ್ತಿದ್ದ ಕಾರಣ ಜಲಾಶಯದಿಂದ ಹೆಚ್ಚುವರಿ ನೀರು ಉಳಿಸಿಕೊಳ್ಳಲಾಗದೆ ಹೊರಬಿಡುವ ನಿಟ್ಟಿನಲ್ಲಿ ತಮಿಳುನಾಡಿಗೆ ನೀರನ್ನು ಹಂಚಿಕೆ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಂದು ನಮಗೆ ನೀರಿನ ಅಭಾವ ಇರುವಾಗ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಳೆ ಆದಾರಿತ ಸಂಕಷ್ಟ ಸೂತ್ರ ರಚಿಸಲು ಎರಡು ಸರ್ಕಾರಗಳ ನಡುವೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಚನ್ನಪಟ್ಟಣ ಕ್ರೀಡೆಗೆ ಹೆಸರುವಾಸಿಯಾಗಿದ್ದು ೨೫ ವರ್ಷಗಳ ಹಿಂದೆ ತಾಲೂಕಿನ ಕ್ರೀಡಾರ್ಥಿಗಳು ಬೆಂಗಳೂರಿನ ರಣಜಿ ಕ್ರಿಕೆಟ್‌ನ ಎಲ್ಲಾ ಆಟಗಾರರ ಜೊತೆ ಕ್ರಿಕೆಟ್ ಆಟವಾಗಿದ ಹೆಗ್ಗಳಿಕೆ ಇದೆ. ಇಂದು ಪಟ್ಟಣದ ಕ್ರೀಡಾರ್ಥಿಗಳನ್ನು ಕರೆದು ಸನ್ಮಾನಿಸಿದ ಕಕಜ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಸೌಕತ್ ಮಾತನಾಡಿ, ಕರುನಾಡು ಎಲ್ಲರ ಮೇಲೂ ಕರುಣೆ ತೋರುತ್ತದೆ. ಈ ನಿಟ್ಟಿನಲ್ಲೇ ರಾಜ್ಯದಲ್ಲಿ ಹತ್ತಾರು ರಾಜ್ಯದ ಜನರಿಗೆ ಆಶ್ರಯ ನೀಡಲಾಗಿದೆ. ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ನಮಗೆ ನೀರಿನ ಅಭಾವ ಇಲ್ಲದ ವೇಳೆ ತಮಿಳುನಾಡು ಕೇಳದಿದ್ದರೂ ನೀರನ್ನು ಹರಿಸಿದ್ದೇವೆ. ಆದರೆ ಇಂದು ಕುಡಿಯುವ ನೀರಿಗೂ ಅಭಾವ ಇರುವಾಗ ಅವರು ಕೃಷಿ ಬೆಳೆಗೆ ನೀರು ಕೇಳುವುದು ಖಂಡನೀಯವಾಗಿದೆ ಎಂದು ಹೇಳಿದರು.
ಗೋವಿಂದಸ್ವಾಮಿ ಮಾತನಾಡಿ, ನಮ್ಮ ಸರ್ಕಾರಕ್ಕೆ ಬದ್ದತೆ ಇಲ್ಲವಾಗಿದ್ದು ರಾಜಕಾರಣಕ್ಕಾಗಿ ನೆಲ, ಜಲವನ್ನು ಬೇರೆಯವರಿಗೆ ಬಿಟ್ಟುಕೊಡುವ ಮೂಲಕ ಸ್ವಾರ್ಥ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ನೆಲ, ಜಲದ ಬಗ್ಗೆ ಭಾಷಣ ಮಾಡುವ ವಿಪಕ್ಷಗಳು ಅಧಿಕಾರ ಬಂದಾಗ ಈ ಬಗ್ಗೆ ಮಾತನಾಡುವುದಿಲ್ಲ. ರಾಜಕಾರಣಿಗಳಿಗೆ ಬದ್ದತೆ ಇಲ್ಲದ ಹೊರತು ಕಾವೇರಿ ನೀರಿನ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಲೇಕೇರಿ ಮಂಜುನಾಥ್ ಮಾತನಾಡಿ, ರಾಜ್ಯದ ದೊಡ್ಡ ಕ್ರಿಕೆಟ್ ಆಟಗಾರರೊಂದಿಗೆ ಕ್ರಿಕೆಟ್ ಆಡಿದ ಹೆಗ್ಗಳಿಗೆ ನಮ್ಮ ಚನ್ನಪಟ್ಟಣದ ಕ್ರೀಡಾಪಟುಗಳಿಗೆ ಇದೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳನ್ನು ಸ್ಮಾನಿಸುವ ಮೂಲಕ ವಿಶ್ವಕಪ್‌ನಲ್ಲಿ ಸಮಿಫೈನಲ್‌ನಲ್ಲಿ ಭಾರತಕ್ಕೆ ಜಯಸಿಗಲಿ ಎಂದು ಆಶಿಸುತ್ತಿದ್ದು, ರಾಜ್ಯದಲ್ಲಿ ನೆಲ, ಜಲ, ಭಾಷೆಯ ವಿಚಾರದಲ್ಲಿ ಸಮಸ್ಯೆ ಉಂಟಾದ ವೇಳೆ ಟಿವಿ ಮಾಧ್ಯಮಗಳು ಒಂದೆರಡು ದಿನಗಳು ಮಾತ್ರ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತಾರೆ ಬಳಿಕ ಮತ್ತೊಂದು ವಿಚಾರ ಸಿಕ್ಕರೆ ಈ ಬಗ್ಗೆ ಮರೆತುಬಿಡುತ್ತಾರೆ. ಆದರೆ ಕಕಜ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಒಂದು ಸಮಸ್ಯೆ ಬಗ್ಗೆ ಹೋರಟಕ್ಕೆ ಇಳಿದರೆ ಸಮಸ್ಯೆ ಬಗೆಹರಿಯುವ ತನಕ ಹೋರಾಟ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಮದ್ದೂರಮ್ಮನ ಕೆರೆಗೆ ನೀರು ಹರಿಸಲು ಅಹೋರಾತ್ರಿ ಧರಣಿ ಮಾಡಿ ಕೆರೆಗೆ ನೀರು ತಂದಿದ್ದೇ ಉದಾಹರಣೆಯಾಗಿದೆ. ಅದೇ ರೀತಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ನಡೆಸುತ್ತಿರುವ ಹೋರಾಟ ಇದೀಗ ೪೨ ನೇ ದಿನಕ್ಕೆ ಕಾಲಿಟ್ಟದ್ದು ಈ ಹೋರಾಟಕ್ಕೆ ಪ್ರತಿಯೊಬ್ಬರ ಬೆಂಬಲ ಬೇಕಿದೆ. ನಿಮಗೆ ಸಮಯ ಸಿಕ್ಕಾಗ ಒಂದು ಗಂಟೆ ಈ ಹೋರಾಟಕ್ಕೆ ಮೀಸಲಿಟ್ಟರೆ ಸಾಕು ಎಂದು ಹೇಳಿದರು.
ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ರಚಿಸುವ ವರೆಗೆ ನಮ್ಮ ಹೋರಾ ನಿರಂತರವಾಗಿರುತ್ತದೆ ಎಂದು ತಿಳಿಸಿದರು. ಬೊಂಬೆನಾಡು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಅದರಲ್ಲೂ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿದ್ದು, ಇಂದು ವಿಶ್ವಕಪ್ ಪಂದ್ಯಾವಳಿಯ ಸೆಮಿಪೈನಲ್ ಪಂದ್ಯಾವಳಿಯ ಪ್ರಯುಕ್ತ ಎಲ್‌ಇಡಿ ಮೂಲಕ ಕ್ರಿಕೆಟ್ ಪ್ರದರ್ಶನ ಮತ್ತು ಹಿರಿಯ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಸಯ್ಯದಾ ಇಶಾ, ನಾಗರಾಜ್, ಚೇತನ್, ಕೃಷ್ಣಮೂರ್ತಿ(ಜಿಕೆ), ರಮೇಶ್, ಶ್ರೀನಿವಾಸ್‌ಮೂರ್ತಿ, ವಿಲಿಯಂ ಲೋಬೋ, ಎಲೇಕೇರಿ ಮಹದೇವ್, ಶ್ರೀನಿವಾಸ್(ಗಿಬ್ಸ್) ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ , ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ತಾಲ್ಲೂಕು ಗೌರವಾಧ್ಯಕ್ಷ ಚಿಕ್ಕಣ್ಣಪ್ಪ, ವೆಂಕಟರಮಣ, ಯೇಸು ಆನಂದಪುರ, ಸಿದ್ದರಾಜು ಸಿದ್ದನಹಳ್ಳಿ, ಸಿದ್ದಪ್ಪಾಜಿ ಚಿಕ್ಕೇನಹಳ್ಳಿ, ಸುರೇಶ್, ಪುಟ್ಟಪ್ಪಾಜಿ, ರಮೇಶ್ ಚಾಲಕರು, ಪ್ರದೀಪ್, ಮಂಗಳ:ವಾರಪೇಟೆ ತಮ್ಮಯ್ಯ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.