ಬಳ್ಳಾರಿ: ಮಧುಮೇಹ (ಶುಗರ್) ಇರುವವರು ಕಾಲ ಕಾಲಕ್ಕೆ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಔಷಧ ತೆಗೆದುಕೊಳ್ಳಬೇಕು. ಮಧುಮೇಹವನ್ನು ಹತೋಟಿಯಲ್ಲಿಡಲು ಕ್ರಮಬದ್ದ ಆಹಾರ ಸೇವನೆ ಅತ್ಯಗತ್ಯವಾಗಿದೆ. ಮಧುಮೇಹ ಇರುವವರು ಎನ್.ಸಿ.ಡಿ ಕ್ಲಿನಿಕ್‍ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಅವರು ತಿಳಿಸಿದರು.
ತಾಲ್ಲೂಕಿನ ರೂಪನಗುಡಿ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾಮನ್ ಭವ ಕೇಂದ್ರ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ವಿಶ್ವ ಮಧುಮೇಹ ದಿನ ಅಂಗವಾಗಿ ಬುಧವಾರದಂದು ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿಹಿ ತಿನಿಸುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಹಾಗೂ ನಿಯಮಿತವಾಗಿ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ದಿನ ನಿತ್ಯ 40 ನಿಮಿಷ ಮಾಡುವುದರ ಮೂಲಕ ಮಧುಮೇಹವನ್ನು ಹತೋಟಿಯಲ್ಲಿಡಬಹುದು ಎಂದು ಹೇಳಿದರು. ಎನ್.ಸಿ.ಡಿ ವಿಭಾಗದ ಆಪ್ತ ಸಮಾಲೋಚಕರಾದ ಅನಿಲ್ ಕುಮಾರ್ ವಿ.ಜಿ ಅವರು, ಸಕ್ಕರೆ ಖಾಯಿಲೆಯನ್ನು ತಡೆಗಟ್ಟುವ ಕ್ರಮಗಳು ಹಾಗೂ ಸಕ್ಕರೆ ಖಾಯಿಲೆಗೆ ಔಷದೋಪಚಾರ ಮತ್ತು ಆಹಾರ ಕ್ರಮದ ಬಗ್ಗೆ ಸಾರ್ವಜನಿಕರಿಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್, ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮ ಸಂಯೋಜಕಿ ಡಾ.ಜಬಿನ್ ತಾಜ್, ಮಕ್ಕಳ ತಜ್ಞ ಡಾ.ತೇಜ.ಎಸ್., ಎನ್.ಸಿ.ಡಿ ವೈದ್ಯಾಧಿಕಾರಿ ಡಾ.ಯಶವಂತ್.ಸಿ., ಅರವಳಿಕೆ ತಜ್ಞರಾದ ಡಾ.ನಾಗಲಕ್ಷ್ಮೀ, ದಂತ ತಜ್ಞರಾದ ಡಾ.ಪ್ರಿಯಾಂಕಾ ರೆಡ್ಡಿ, ವೈದ್ಯಾಧಿಕಾರಿ ಡಾ.ನಾರಾಯಣಬಾಬು, ಕಚೇರಿ ಅಧೀಕ್ಷಕಿ ಶಿಲ್ಪ, ಪ್ರಥಮ ದರ್ಜೆ ಸಹಾಯಕ ವಿರೂಪಾಕ್ಷ ಸ್ವಾಮಿ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.