ಮೈಸೂರು : ಅದಮ್ಯ ರಂಗಶಾಲೆಯ ವತಿಯಿಂದ ನ. ೧೮ ರಂದು ಸಂಜೆ ೫-೩೦ ಕ್ಕೆ ನಗರದ ಜಯಲಕ್ಷ್ಮಿಪರಂನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.
ಸಮಾರಂಭವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಉದ್ಘಾಟಿಸಲಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಪ್ರೊ. ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡುವರು. ಪಂಪ ಪ್ರಶಸ್ತಿ ಪುರಸ್ಕೃತ ಬಹುಶ್ರುತ ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಯಾಗಿ ದಿ ನೆಸ್ಟ್ ಟ್ರಸ್ಟಿನ ಅಧ್ಯಕ್ಷ ಲಯನ್ ಡಿ.ಎಸ್. ಸತೀಶ್ ಪಾಲ್ಗೊಳ್ಳುವರು.
‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’ ಪುರಸ್ಕೃತರು: ಮೈಸೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಆರ್.ಎಸ್.ನರಸೇಗೌಡ, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಉದಯಶಂಕರ್, ಹಾಸನದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಿ.ಟಿ. ಅನ್ನಪೂರ್ಣ, ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎ. ರಾಮೇಗೌಡ, ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ. ಮಾಲತಿ, ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಲೋಕೇಶ ಬೆಕ್ಕಳಲೆ, ಮೈಸೂರಿನ ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೃ.ಪಾ. ಮಂಜುನಾಥ್, ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಜಿ.ಆರ್. ಶ್ರೀವತ್ಸ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’ ಸ್ವೀಕರಿಸುವರು.
ಪ್ರಶಸ್ತಿ ಪ್ರದಾನದ ಬಳಿಕ ಅದಮ್ಯ ರಂಗಶಾಲೆಯ ಮಕ್ಕಳಿಂದ ಕೃಷ್ಣಮೂರ್ತಿ ಬಿಳಿಗೆರೆ ರಚನೆಯ ‘ಹುಯ್ಯೋ ಹುಯ್ಯೋ ಮಳೆರಾಯ’ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕವನ್ನು ಎಂ. ಮನೋಜ್ ನಿರ್ದೇಶನ ಮಾಡಿದ್ದು, ಲೋಕನಾಥ್ ಸೋಗಂ ಅವರ ಸಂಗೀತ ನಿರ್ದೇಶನವಿದೆ. ನಾಟಕಕ್ಕೆ ನೂರು ರೂಪಾಯಿ ಪ್ರೋತ್ಸಾಹ ಧನವಿದೆ.