

ಮಂಡ್ಯ: ಅಭಿವೃದ್ಧಿ ಹೆಸರಲ್ಲಿ ಬಾಲಕಾರ್ಮಿಕರನ್ನು ಕಡಿಮೆ ವೇತನಕ್ಕೆ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದು ಅಪರಾಧ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಜಿ ರಮಾ ಅವರು ತಿಳಿಸಿದರು.
ಅವರು ಇಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲ ಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರು ಖಾಸಗಿ ಸಂಸ್ಥೆ, ಉದ್ದಿಮೆಗಳಲ್ಲಿ ಹಾಗೂ ಮನೆಗಳಲ್ಲೂ ಕೂಡ ಇರುತ್ತಾರೆ. ಇದು ಕಾನೂನು ಅಪರಾಧವಾಗಿದೆ. ಕಾನೂನು ಬಂದರೂ ಅದನ್ನು ಉಲ್ಲಂಘಿಸಿ ಹಲವು ಸಂಸ್ಥೆಗಳು ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿವೆ ಎಂದು ವಿಷದ ವ್ಯಕ್ತಪಡಿಸಿದರು.
ಬಾಲಕಾರ್ಮಿಕ ಪದ್ಧತಿ ಹಾಗೂ ಅದರ ಕಾನೂನುನಿನ ಬಗ್ಗೆ ತಿಳುವಳಿಕೆ ಬರಲಿ ಎಂದು ಇಂತಹ ಜಾಗೃತಿ ಜಾಥಗಳು ನಡೆಯುತ್ತಿವೆ. ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ಧತಿಯನ್ನು ಅನುಸರಿಸಿದರೆ ಕಾನೂನಿನ ಪಂಜರದಲ್ಲಿ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಮಾತನಾಡಿ ೧೮ ವರ್ಷದ ಕೆಳಗಿನ ಮಕ್ಕಳನ್ನ ಬಾಲಕಾರ್ಮಿಕರಾಗಿ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದರು.
ಸಾರ್ವಜನಿಕರು ಹಾಗೂ ಪೊಷಕರು ತಮ್ಮ ಮಕ್ಕಳನ್ನ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದೆ ಕಷ್ಟ ಕಾರ್ಪಣ್ಯಗಳಿದ್ದರು ಸರ್ಕಾರ ನೀಡುತ್ತಿರುವ ಉಚಿತ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕು. ಆ ಮೂಲಕ ಸಾಕ್ಷರ ಹಾಗೂ ಸಭ್ಯ ಸಮಾಜ ನಿರ್ಮಾಣ ಮಾಡುವುದಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾಡಳಿತ ಪರವಾಗಿ ಮನವಿ ಮಾಡುತ್ತಿದ್ದೇನೆ ಎಂದರು.
ಖಾಸಗಿ ಸಂಸ್ಥೆ, ಹೋಟೆಲ್, ನಗರ ಸ್ಥಳೀಯ ಸಂಸ್ಥೆ, ಹಾಗೂ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಂಡು ಬಂದರೆ ಅವರನ್ನ ಶಿಕ್ಷೆಗೆ ಒಳಪಡಿಸಲಾಗುವುದು. ಹಾಗಾಗಿ ಇದಕ್ಕೆ ಅವಕಾಶ ಮಾಡಿಕೊಡದೆ ಎಲ್ಲಾ ಪೊಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.
ಜಾಥವು ಜಿಲ್ಲಾಧಿಕಾರಿ ಕಛೇರಿಯಿಂದ ಹೊರಟು ಮೈಸೂರು- ಬೆಂಗಳೂರು ರಸ್ತೆ, ಸಂಜಯ ವೃತ್ತದ ಮೂಲಕ ಕರ್ನಾಟಕ ಸಂಘ ತಲುಪಿತು.
ಜಾಥದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ.ಎ ಶೆಟ್ಟಿ, ಕಾರ್ಮಿಕ ಅಧಿಕಾರಿ ಮಂಜುಳಾದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ ಜವರೇಗೌಡ, ವಕೀಲರ ಸಂಘದ ಅಧ್ಯಕ್ಷ ಎಂ.ಟಿ ರಾಜೇಂದ್ರ ಸೇರಿದಂತೆ ಹಲವರು ಇದ್ದರು.