ರಾಮಾ ರಾಮಾ ರೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಾಸುಕಿ ವೈಭವ್ ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಹಸೆಮಣೆ ಏರಿದ್ದಾರೆ. ರಾಮಾ ರಾಮಾ ರೇ ಸಿನಿಮಾದ ಸಕ್ಸಸ್ ಜೊತೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ವಾಸುಕಿ ವೈಭವ್ ಅವರೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗುರು ಹಿರಿಯರ ಸಮ್ಮುಖದಲ್ಲಿ ಬೃಂದಾ ವಿಕ್ರಮ್ ಜೊತೆ ವಾಸುಕಿ ವೈಭವ್ ಅವರ ಕಲ್ಯಾಣ ಜರುಗಿದೆ. ಬಹುಕಾಲದ ಗೆಳತಿ ಜೊತೆ ಬಹಳ ಸರಳವಾಗಿ ಹಿಂದೂ ಸಂಪ್ರದಾಯದ ಪ್ರಕಾರ ವಾಸುಕಿ ವೈಭವ್ ಮದುವೆ ಆಗಿದ್ದಾರೆ. ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಬೃಂದಾ ವಿಕ್ರಮ್ ಅವರು ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಶಿಕ್ಷಕಿ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ.
ಹೆಚ್ಚಾಗಿ ವಾಸುಕಿ ಜೊತೆ ಬೃಂದಾ ಕಾಣಿಸಿಕೊಳ್ಳುತ್ತಿದ್ದರು. ಅದರೆ ವಾಸುಕಿ ಮತ್ತು ಬೃಂದಾ ಅವರು ತಮ್ಮ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯ ಕೋರಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ಟಗರು ಪಲ್ಯ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಮೂಲಕವೂ ಗಮನ ಸೆಳೆದಿದ್ದಾರೆ. ಇದೀಗ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ನವದಂಪತಿಗೆ ಕನ್ನಡ ಚಿತ್ರರಂಗದ ಗೆಳೆಯರು ಶುಭಾಶಯ ತಿಳಿಸಿದ್ದಾರೆ.