ಬೆಂಗಳೂರು: ಯತೀಂದ್ರ ಅವರು ವರ್ಗಾವಣೆ ಬಗ್ಗೆ ಮಾತಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಾನು ನೀಡಿದ ಲಿಸ್ಟ್ ನದ್ದು ಮಾತ್ರ ಮಾಡಿ ಎಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಮಾಜಿ ಶಾಸಕ ಡಾ. ಯತೀಂದ್ರ ಅವರು ಸೂಚಿಸಿರುವ ವಿಡಿಯೋ ವೈರಲ್ ಆಗಿದೆ. ಪುತ್ರನ ವಿಡಿಯೋ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯತೀಂದ್ರ ಅವರು ವರ್ಗಾವಣೆ ಬಗ್ಗೆ ಮಾತಾಡಿಲ್ಲ. ಸಿಎಸ್ ಆರ್ ಫಂಡ್ ವಿಚಾರವಾಗಿ ಯತೀಂದ್ರ ಮಾತಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳು ಆರೋಪ ಮಾಡುತ್ತಿವೆ ಎಂದು ದೂರಿದರು.
ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಐದು ಹೆಸರು ಅಂದರೆ ವರ್ಗವಣೆಯಾ? ಅದು ಸಿಎಸ್‌ಆರ್ ಲಿಸ್ಟ್. ಶಾಲೆ ಕಟ್ಟಡಗಳನ್ನು ಸಿಎಸ್ ಆರ್ ಫಂಡ್ ನಿಂದ ರಿಪೇರಿ ಮಾಡಿಸಲಾಗುತ್ತಿದೆ. ಅದರ ಬಗ್ಗೆ ಯತೀಂದ್ರ ಹೇಳಿದ್ದು. ಕುಮಾರಸ್ವಾಮಿ ರಾಜಕೀಯಕ್ಕೆ ಆರೋಪ ಮಾಡುತ್ತಾರೆ ಎಂದರು.