Tuesday, April 22, 2025
Google search engine

Homeರಾಜ್ಯಕುಸುಮ್‌ ಬಿ': ಮಾಸ್ಟರ್ ಟ್ರೈನರ್’ಗಳನ್ನು ನಿಯೋಜಿಸಲಿದೆ ಇಂಧನ ಇಲಾಖೆ

ಕುಸುಮ್‌ ಬಿ’: ಮಾಸ್ಟರ್ ಟ್ರೈನರ್’ಗಳನ್ನು ನಿಯೋಜಿಸಲಿದೆ ಇಂಧನ ಇಲಾಖೆ

ಬೆಂಗಳೂರು: ನೀರಾವರಿಗೆ ಸಾಂಪ್ರದಾಯಿಕ ಇಂಧನದ ಅವಲಂಬನೆ ತಗ್ಗಿಸಿ  ಸೌರ ಪಂಪ್‌ಸೆಟ್‌ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ‘ಕುಸುಮ್‌ ಬಿ’ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಿರುವ ರಾಜ್ಯ ಸರ್ಕಾರ, ರೈತರಿಗೆ ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಯೋಜನೆಯ ಅನುಕೂಲತೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಅವರು ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳುವಂತೆ ಮಾಡಲು ಇಂಧನ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಲು ಕ್ರೆಡಲ್‌ ವತಿಯಿಂದ ಗುರುವಾರ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ‘ಕುಸುಮ್‌ ಬಿ ಯೋಜನೆ ಅನುಷ್ಠಾನದಿಂದ ರೈತರಿಗೂ ಹಾಗೂ ಸರ್ಕಾರಕ್ಕೂ ಲಾಭವಿದೆ. ಈ ಯೋಜನೆ ರಾಜ್ಯದ ಪ್ರತಿ ರೈತರಿಗೂ ತಲುಪಿಸುವುದು ಅಧಿಕಾರಿಗಳ ಹೊಣೆ. ಈ ನಿಟ್ಟಿನಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರ ನಿರ್ದೇಶನದಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ,”ಎಂದರು.

“ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್‌ಗಳ ಸಂಖ್ಯೆ‌ ಜತೆಗೆ ಅವುಗಳ ಬಳಕೆ ಪ್ರಮಾಣವೂ ಹೆಚ್ಚಿದೆ. ಶೇ.40ರಷ್ಟು ವಿದ್ಯುತ್ ಇದೇ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹಾಗಾಗಿ ಪೂರೈಕೆ ಕಷ್ಟ ಆಗುತ್ತಿದೆ. ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್‌ ಬಳಕೆಯೇ ಪರಿಹಾರ ಈ ನಿಟ್ಟಿನಲ್ಲಿ ‘ಕುಸುಮ್‌ ಬಿ’ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ಈ ಬಗ್ಗೆ ರೈತರಲ್ಲಿ ಮೂಡುವ ಎಲ್ಲ ಗೊಂದಲಗಳಿಗೆ ಪರಿಹಾರ ಸೂಚಿಸಲು ಅಧಿಕಾರಿಗಳು ಸಜ್ಜಾಗಲಿದ್ದಾರೆ. ತರಬೇತಿ ಪಡೆದ ‘ಮಾಸ್ಟರ್‌ ಟ್ರೇನರ್‌’ಗಳು ರೈತರಿಗೆ ಈ ಬಗ್ಗೆ ಮಾಹಿತಿ ನೀಡಿ, ಯೋಜನೆ ಜಾರಿಗೆ ಸಹಕರಿಸಲಿದ್ದಾರೆ,”ಎಂದರು.

“ಮಹಾರಾಷ್ಟ್ರದಲ್ಲಿ ‘ಕುಸುಮ್‌ ಬಿ’ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲಾಗಿದೆ. ನಮ್ಮ ರಾಜ್ಯದ ಅಧಿಕಾರಿಗಳು ಅಲ್ಲಿಗೆ ತೆರಳಿ ಅಧ್ಯಯನ ಮಾಡಿದ್ದಾರೆ. ಇಂದಿನ ಕಾರ್ಯಾಗಾರದಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಪೂರ್ಣ ತರಬೇತಿ ಪಡೆದ ‘ಮಾಸ್ಟರ್‌ ಟ್ರೇನರ್‌’ಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತದೆ,”ಎಂದು ವಿವರಿಸಿದರು.  

“ಸೌರಶಕ್ತಿಯ  ಸುಲಭ ಸ್ಥಾಪನೆ ಮತ್ತು ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ  ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿವಾಗುತ್ತಿದೆ. ಈ ಹಿಂದೆ ಯೋಜನೆಗೆ ರಾಜ್ಯದಿಂದ ಶೇ.30 ಮತ್ತು ಕೇಂದ್ರದಿಂದ ಶೇ.30 ಸಬ್ಸಿಡಿ ನೀಡಲಾಗುತ್ತಿತ್ತು. ಇತ್ತೀಚಿನ ಸಂಪುಟ ಸಭೆಯ ನಿರ್ಧಾರದಂತೆ ರಾಜ್ಯ ಸರ್ಕಾರದ ಸಬ್ಸಿಡಿಯನ್ನು ಶೇ. 50ಕ್ಕೆ ಏರಿಸಲಾಗಿದೆ. ಯೋಜನೆಯಡಿ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸಲಾಗುತ್ತದೆ,”ಎಂದು ಗುಪ್ತ ಹೇಳಿದರು.

ಶೀಘ್ರದಲ್ಲೇ ಟೆಂಡರ್

“ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸುತ್ತಿರುವ ಯೋಜನೆಗೆ ಅಧಿಕೃತ ವಿತರಕರನ್ನು ನಿಯೋಜಿಸಲು ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು. ಮಹಾರಾಷ್ಟ್ರ ಮಾದರಿಯಲ್ಲಿ 20-30 ವಿತರಕರನ್ನು ಗುರುತಿಸಿ ಆಯಾ ಜಿಲ್ಲೆಗಳಿಗೆ ನಿಯೋಜಿಸಲಾಗುತ್ತದೆ. ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆ, ನಿರ್ವಹಣೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸುತ್ತಾರೆ,”ಎಂದು ಅವರು ಮಾಹಿತಿ ನೀಡಿದರು.

ಕುಸುಮ್‌ ಬಿ

ಸಾಂಪ್ರದಾಯಿಕ ಗ್ರಿಡ್-ಆಧಾರಿತ ವಿದ್ಯುತ್‌ ಅವಲಂಬನೆಯನ್ನು ತಗ್ಗಿಸಲು, ರೈತರಿಗೆ  ಸೌರ ಚಾಲಿತ ಪಂಪ್‌ ಸೆಟ್‌ ಗಳ ಬಳಕೆಗೆ ಒತ್ತು ನೀಡಲು ಸರ್ಕಾರ ರೈತರಿಗೆ ಸಬ್ಸಿಡಿ ನೀಡುತ್ತದೆ. ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 7.5 ಎಚ್.ಪಿ. ಸಾಮರ್ಥ್ಯದ ಸೌರ ಪಂಪ್ ಸೆಟ್‍ಗೆ ಶೇಕಡ 30 ಕೇಂದ್ರ ಸರ್ಕಾರದಿಂದ ಸಹಾಯಧನ ಒದಗಿಸುತ್ತದೆ.

ಸಭೆಯಲ್ಲಿ ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ  ಮತ್ತು ಇತರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular