ಪೊಲೀಸ್ ಇಲಾಖೆ ಎಚ್ಚರವಹಿಸಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯ
ಕೆ.ಆರ್.ನಗರ : ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಅಡ್ಡಗಳು ಹಾಗೂ ಅನಧಿಕೃತ ಕ್ಲಬ್‌ಗಳು ತಲೆಯೆತ್ತಿದ್ದು ಇದರಿಂದಾಗಿ ದಲಿತ ಯುವಕರು ಹೆಚ್ಚಾಗಿ ಹಣ ಕಳೆದುಕೊಂಡು ಹಾಳಾಗುತ್ತಿದ್ದಾರೆ ಎಂದು ದಲಿತ ಮುಖಂಡ ಹಂಪಾಪುರ ಸುರೇಶ್ ಆರೋಪಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಕರೆಯಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಪೊಲೀಸ್ ಇಲಾಖೆಗೆ ದೂರು ಹೇಳಿದ್ದಾಗ ಮುಚ್ಚಿಸಿದ್ದ ಕ್ಲಬ್‌ಗಳನ್ನು ಮತ್ತೆ ತೆರೆದು ಇಸ್ಪೀಟ್ ಅಡ್ಡೆ ಮಾಡಲಾಗಿದೆ, ಅಲ್ಲದೆ ಕೆ.ಆರ್.ನಗರಕ್ಕೆ ಕೇರಳ ಭಾಗದಿಂದ ಡ್ರಗ್ಸ್ ಮತ್ತು ಗಾಂಜಾ ಬರುತ್ತಿದ್ದು ಇಲ್ಲಿಂದ ಹುಣಸೂರು ತಾಲೂಕಿಗೆ ಸರಬರಾಜಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚರವಹಿಸಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್‌ಶಂಕರ್ ಮಾತನಾಡಿ ಪಟ್ಟಣದ ಗಾಂಧಿ ಉದ್ಯಾನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಅಲ್ಲಿ ವಿಶ್ರಮಿಸಲು ತೆರಳುವ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ಕಿರಿಕಿರಿಯ ಎದುರಾಗುತ್ತಿದೆ ಆದ್ದರಿಂದ ಪೊಲೀಸರು ಬೀಟ್ ಮಾಡಿ ಅಂತವರಿಗೆ ಶಿಕ್ಷೆ ನೀಡಬೇಕಲ್ಲದೆ ಡಾ.ರಾಜ್‌ಕುಮಾರ್ ಬಾನಂಗಳದಲ್ಲಿ ರಾತ್ರಿ ವೇಳೆ ಕುಳಿತು ಮಧ್ಯಪಾನ ಮಾಡುವ ಕುಡುಕರ ಹಾವಳಿ ಹೆಚ್ಚಾಗಿದ್ದು ನಿಯಂತ್ರಿಸಬೇಕೆoದು ಕೋರಿದರು.
ದಲಿತ ಮುಖಂಡ ಹೊಸಕೋಟೆ ಚೆಲುವರಾಜ್ ಮಾತನಾಡಿ ಪ್ರೀತಿಸಿ ಅಂತರ ಜಾತಿ ವಿವಾಹ ಆಗುವಂಥ ಪ್ರೇಮಿಗಳನ್ನು ಠಾಣೆಗೆ ಕರೆಸಿ, ನ್ಯಾಯ ಪಂಚಾಯಿತಿ ಮಾಡಿ ಇಬ್ಬರನ್ನು ಬೇರ್ಪಡಿಸುವ ಕೆಲಸ ಕೆಲವು ಪೊಲೀಸರಿಂದ ಕುಮ್ಮಕ್ಕಿನಿಂದ ನಡೆಯುತ್ತಿದೆ. ಕೆಲ ಸಂದರ್ಭದಲ್ಲಿ ಸರಿಯಾಗಿ ಪರಿಶೀಲನೆ ಮಾಡದೆ ಕೂಲಿ ಕಾರ್ಮಿಕರನ್ನು ಕಳ್ಳರೆಂದು ಬಿಂಬಿಸಿ ಠಾಣೆಗೆ ಕರೆತಂದು ತೊಂದರೆ ನೀಡಲಾಗುತ್ತಿದ್ದು ಇಂತಹ ಕೆಲಸಗಳಿಗೆ ಆದ್ಯತೆ ನೀಡಬಾರದೆಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್ ಮಾತನಾಡಿ ಮುಜರಾಯಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನಗಳ ಹೊರಭಾಗದಲ್ಲಿ ಇಲಾಖೆ ವತಿಯಿಂದ ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ ಎಂದು ನಾಮಫಲಕಗಳನ್ನು ಅಳವಡಿಸಿ ಪ್ರದರ್ಶಿಸಬೇಕು ಎಂದು ಪೊಲೀಸ್ ಇಲಾಖೆ ಸಂಬoಧಪಟ್ಟ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ನಮ್ಮ ಗ್ರಾಮ ಒಂದರಲ್ಲೆ ಕುಡಿತದ ಚಟಕ್ಕೆ ದಾಸರಾಗಿ ೧೭ ಮಂದಿ ಯುವಕರು ಸಾವನಪ್ಪಿರುವುದು ನೋವಿನ ಸಂಗತಿ ಆಗಿದ್ದು ಅಕ್ರಮ ಮಧ್ಯ ಮಾರಾಟದ ಬಗ್ಗೆ ಅನೇಕ ಬಾರಿ ಪೊಲೀಸ್ ಇಲಾಖೆಗೆ ತಿಳಿಸಿದ್ದರೂ ಸೂಕ್ತವಾದ ಕ್ರಮ ಕೈಗೊಳ್ಳದೆ ಇರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಭೀಮ್ ಆರ್ಮಿ ಸಂಘಟನೆ ಅಧ್ಯಕ್ಷ ಗುರುಮೂರ್ತಿ ಒತ್ತಾಯಿಸಿದರು.
ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪುತ್ತಳಿ ಬಳಿ ಕುಡುಕರು ಹಾಡುವಾಗಲೇ ಮಧ್ಯಪಾನ ಮಾಡಿ ಮಲಗುತ್ತಿದ್ದು ಅನೈರ್ಮಲ್ಯ ಗೊಳಿಸುತ್ತಿದ್ದಾರೆ. ಪುತ್ತಳಿ ಮುಂಭಾಗ ಹಣ್ಣಿನ ಅಂಗಡಿಗಳಿರುವುದರಿಮದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಯಾಗುತ್ತಿದೆಯಲ್ಲದೇ ಮದುವನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಇರುವ ಮಾಂಸದ ಅಂಗಡಿಗಳ ಮಾಲೀಕರು ತಮ್ಮ ಮಳಿಗೆಯಲ್ಲಿ ಮಾಂಸ ಮಾರಾಟ ಮಾಡದೇ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಕಿರಿಕಿರಿ ಆಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮುಖಂಡ ರವಿಪೂಜಾರಿ ಮನವಿ ಮಾಡಿದರು.
ಎಲ್ಲಾ ದೂರುಗಳನ್ನು ಆಲಿಸಿದ ಪೊಲೀಸ್ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್ ಮಾತನಾಡಿ ನಮ್ಮ ಇಲಾಖೆಗೆ ಸಂಬAಧಪಟ್ಟ ದೂರುಗಳನ್ನು ಕೂಡಲೇ ಸರಿಪಡಿಸಲಾಗುವುದು ಅಲ್ಲದೆ ರಸ್ತೆ ಸಂಚಾರ ಕಾನೂನು ವ್ಯವಸ್ಥೆ ಇವುಗಳ ಬಗ್ಗೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಲಾಗುವುದು. ಈ ಬಗ್ಗೆ ದೂರುಗಳಿದ್ದರೆ ಯಾವುದೇ ಅಂಜಿಕೆ ಇಲ್ಲದೆ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದು ಕೋರಿದರು.
ಈಗಾಗಲೇ ಪರಿಶಿಷ್ಟ ಸಮುದಾಯದವರಿಗೆ ಅನ್ಯಾಯವಾಗದಂತೆ ಬೇರೆ ಬೇರೆ ಇಲಾಖೆಗಳಿಗೆ ಸಂಬAಧಪಟ್ಟ ದೂರುಗಳನ್ನು ಪತ್ರ ವ್ಯವಹಾರದ ಮೂಲಕ ಅವರ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯ ನಡುವೆಯು ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಕಾನೂನು ಸುವ್ಯವಸ್ಥೆ, ಕಾಪಾಡುವುದಾಗಿ ಭರವಸೆ ನೀಡಿದರು.
`ಸಭೆಯಲ್ಲಿ ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ದಸಂಸ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿಚಂದ್ರು, ತಾಲೂಕು ಸಂಚಾಲಕ ಬಲರಾಮ, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಮಧುವನಹಳ್ಳಿರವಿಕುಮಾರ್, ಗ್ರಾಪಂ ಮಾಜಿ ಸದಸ್ಯ ಕೃಷ್ಣನಾಯಕ್, ದಲಿತ ಮುಖಂಡರಾದ ಸಿದ್ದಾಪುರ ರಮೇಶ್, ಬಿ.ಹೆಚ್.ಕುಮಾರ್ ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾರಗೌಡನಹಳ್ಳಿರಾಜೇಶ್, ಸಣ್ಣಯ್ಯ, ಪಿಎಸ್‌ಐಗಳಾದ ಧನರಾಜ್, ಗುರುಮೂರ್ತಿ, ಸಿಬ್ಬಂದಿಗಳಾದ ಮಂಜು ರಾಮೇನಹಳ್ಳಿ ರಾಘವೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
