ಕೋಲ್ಕತ್ತ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೋಲ್ಕತ್ತದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮೂರು ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶ ಮಾಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಎಂಟನೆ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶ ಮಾಡಿದಂತಾಯಿತು. ದಕ್ಷಿಣ ಆಫ್ರಿಕಾ ನೀಡಿದ್ದ ೨೧೨ ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ ೪೭.೨ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೨೧೫ ರನ್ ಗಳಿಸಿ ವಿಜಯದ ಕೇಕೆ ಹಾಕಿತು. ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಆಟವಾಡಿದ ಮಿಚಲ್ ಸ್ಟಾರ್ಕ್ ಹಾಗೂ ಫ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾವನ್ನು ಗೆಲುವಿನ ದಡ ಮುಟ್ಟಿಸಿದರು.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (೬೨) ಅವರನ್ನು ಬಿಟ್ಟರೇ ಉಳಿದವರು ರನ್ ಗಳಿಸುವಲ್ಲಿ ತೀರಾ ಪ್ರಯಾಸಪಟ್ಟರು. ಡೇವಿಡ್ ವಾರ್ನರ್ ೨೯, ಮಿಚಲ್ ಮಾರ್ಷ್ ೦, ಸ್ಟೀವ್ ಸ್ಮಿತ್ ೩೦, ಮಾರ್ನುಸ್ ೧೮, ಗ್ಲೇನ್ ಮ್ಯಾಕ್ಸವೆಲ್ ೧, ಜೋಶ್ ಇಂಗ್ಲಿಶ್ ೨೮ ರನ್ ಬಾರಿಸಿದರು. ಈ ಮೂಲಕ ವಿಶ್ವಕಪ್ ಕ್ರಿಕೆಟ್‌ನಲ್ಲಿ ಚೋಕರ್ಸ್ ಹಣೆಪಟ್ಟಿ ಹೊತ್ತಿರುವ ದಕ್ಷಿಣ ಆಫ್ರಿಕಾ ಮತ್ತೆ ಅದೇ ಹಣೆಪಟ್ಟಿಯನ್ನು ಹೊತ್ತುಕೊಂಡು ಟೂರ್ನಿಯಿಂದ ನಿರ್ಗಮಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಸಮಯೋಚಿತ ಶತಕದ (೧೦೧) ಹೊರತಾಗಿಯೂ ಬ್ಯಾಟಿಂಗ್ ಕುಸಿತ ಕಂಡಿರುವ ದಕ್ಷಿಣ ಆಫ್ರಿಕಾ, ೪೯.೪ ಓವರ್‌ಗಳಲ್ಲಿ ೨೧೨ ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ಅತಿಥೇಯ ಭಾರತ ತಂಡವು ಈಗಾಗಲೇ ಫೈನಲ್‌ಗೆ ಲಗ್ಗೆ ಇಟ್ಟಿದೆ.



