ಉಡುಪಿ: ಉಡುಪಿಯ ನೇಜಾರಿಗೆ ನಾಲ್ವರ ಹತ್ಯೆ ನಡೆಸಿದ ಆರೋಪಿ ಪ್ರವೀಣ್ ಚೌಗಲೆಯನ್ನು ಪೊಲೀಸರು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದು, ಈ ಸಂದರ್ಭ ಸ್ಥಳೀಯರು ಆಕ್ರೋಶಭರಿತರಾಗಿ ಆರೋಪಿಯನ್ನು ಗಲ್ಲಿಗೇರಿಸಿ ಎಂದ ಘಟನೆ ನಡೆಯಿತು. ಬಳಿಕ ಲಘುವಾದ ಲಾಠಿ ಚಾರ್ಜ್ ಮಾಡಿದ ಬಳಿಕ ಪರಿಸ್ಥಿತಿ ಶಾಂತಗೊಂಡಿತು.
ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ನಡೆಸಿದ ಪ್ರಕರಣದ ಆರೋಪಿಯನ್ನು ನೇಜಾರಿನ ತೃಪ್ತಿ ನಗರದಲ್ಲಿ ಸ್ಥಳ ಮಹಜರಿಗೆ ಕರೆತಂದ ಸಂದರ್ಭ ನಡೆದ ಘಟನೆ ಇದು. ಹತ್ಯೆ ನಡೆದ ಮನೆಗೆ ಬಂಧಿತ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಚೌಗಲೆ (೪೦) ಯನ್ನು ಪೊಲೀಸರು ಬಿಗಿ ಭದ್ರತೆಯ ನಡುವೆ ಕರೆತಂದಿದ್ದಾರೆ. ಈ ವೇಳೆ ಜಮಾಯಿಸಿದ್ದ ಸ್ಥಳೀಯರು ಆಕ್ರೋಶ ಹೊರಹಾಕಿ, ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಹೇಳಿದರು. ಈ ಸಂದರ್ಭ ಆರೋಪಿಯನ್ನು ಗಲ್ಲಿಗೇರಿಸಿ ಎಂಬ ಘೋಷಣೆಗಳೂ ಕೇಳಿಬಂದವು. ಜನರ ಆಕ್ರೋಶ ಭುಗಿಲೆದ್ದ ಸಂದರ್ಭ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಉದ್ರಿಕ್ತರನ್ನು ಚದುರಿಸಿದರು.
ಘಟನೆಯ ತರುವಾಯ ಈ ಭಾಗದಲ್ಲಿ ಜನರ ದಟ್ಟಣೆ ಹೆಚ್ಚಾದಂತೆ ವಾಹನಗಳ ದಟ್ಟಣೆಯೂ ಕಂಡುಬಂತು. ಟ್ರಾಫಿಕ್ ಜಾಮ್ ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹೆಚ್ಚುವರಿ ಪೊಲೀಸ್ ತುಕಡಿಗಳೂ ಬಂದವು. ಸ್ಥಳಕ್ಕೆ ಎಸ್ಪಿ, ಡಿಸಿ ಬರಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆಯನ್ನೂ ನಡೆಸಿದರು. ಒಂದು ಹಂತದಲ್ಲಿ ಧಿಕ್ಕಾರ ಘೋಷಣೆಯೂ ಕೇಳಿಬಂತು. ಜನರ ಆಕ್ರೋಶದ ನಡುವೆ ಪೊಲೀಸರು ಪ್ರವೀಣ್ ಚೌಗಲೆಯನ್ನು ಕರೆತಂದು ಸ್ಥಳಮಹಜರು ನಡೆಸಿ ಮರಳಿ ಕರೆದೊಯ್ದರು. ಹತ್ತು ದಿನದಲ್ಲಿ ಗಲ್ಲು ಶಿಕ್ಷೆ ನೀಡಿ,ಇಲ್ಲವಾದರೆ ನಮಗೊಪ್ಪಿಸಿ ನಲ್ಲೇ ಶಿಕ್ಷೆ ಕೊಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ಳಂಬೆಳಗ್ಗೆ ಉಡುಪಿಯ ಬಳಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಸ್ಥಳ ಮಹಜರು ಮಾಡಲು ಕರೆದೊಯ್ದ ವೇಳೆ ಸಾರ್ವಜನಿಕರು ಆರೋಪಿಗೆ ೧೦ ದಿನದಲ್ಲಿ ಗಲ್ಲು ಶಿಕ್ಷೆ ಕೊಡುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರು ಆರೋಪಿಯ ವಾಹನದ ಬಳಿ ತೆರಳಲು ನುಗ್ಗಿದ ಸಂದರ್ಭದಲ್ಲಿ ಆರೋಪಿಯನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದುಕೊಂಡು ಹೋಗಲು ಲಘು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಲಾಯಿತು. ಆರೋಪಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಸ್ಥಳದ ಮಹಜರು ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯ ಬಳಿ ಸಂತ್ರಸ್ಥ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
