
ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಅರಿಶಿಣ ಖರೀದಿ ಕೇಂದ್ರ ಆರಂಭಿಸುವಂತೆ ಅರಿಶಿಣ ಬೆಳೆಗಾರರ ರಾಜ್ಯ ಸಂಘಟನೆ, ರೈತ ಸಂಘಟನೆ ಮತ್ತು ರೈತರು ಪ್ರತಿಭಟನೆ ನಡೆಸಿದರು.
ಗುಂಡ್ಲುಪೇಟೆ: ಅರಿಶಿಣ ಖರೀದಿ ಕೇಂದ್ರವನ್ನು ಕೂಡಲೇ ತೆರೆಯುವಂತೆ ಒತ್ತಾಯಿಸಿ ಅರಿಶಿಣ ಬೆಳಗಾರರ ಒಕ್ಕೂಟ ಮತ್ತು ರೈತ ಸಂಘಟನೆ ಪದಾಧಿಕಾರಿಗಳು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಪ್ರವೇಶದ್ವಾರ ಬಂದ್ ಮಾಡಿದ ರಾಜ್ಯ ಅರಿಶಿಣ ಬೆಳಗಾರರ ಒಕ್ಕೂಟ ಮತ್ತು ರೈತ ಸಂಘಟನೆ ಪದಾಧಿಕಾರಿಗಳು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು, ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದರೂ ಯೋಗ್ಯ ಬೆಲೆ ದೊರಕದ ಹಿನ್ನೆಲೆಯಲ್ಲಿ ಕನಿಷ್ಟ ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಸಬೇಕು ಎಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ದಿಲ್ಲಿಗೂ ನಿಯೋಗ ತೆರಳಿ ಕೇಂದ್ರ ಸರಕಾರದ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿ ಕೇಂದ್ರ ತೆರೆಯುವಂತೆ ಆದೇಶವಾಗಿತ್ತು. ಅದರಂತೆ ತೆರೆದಿದ್ದ ಖರೀದಿ ಕೇಂದ್ರವನ್ನು ಚುನಾವಣೆ ನೀತಿ ಸಂಹಿತೆ ಮುಗಿದ ಹಿನ್ನೆಲೆಯಲ್ಲಿ ಪುನರಾರಂಭಿಸುವಂತೆ ಆದೇಶವಾಗಿ 21 ದಿನ ಕಳೆದಿದೆ. ಆದರೂ ಖರೀದಿ ಕೇಂದ್ರ ತೆರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಈಗಾಗಲೇ ಅಧಿಕೃತವಾಗಿ 97 ರೈತರಿಂದ 3.398 ಕ್ವಿಂಟಾಲ್ ಅರಿಶಿಣವನ್ನು ಖರೀದಿಗಾಗಿ ಬುಕ್ಕಿಂಗ್ ಮಾಡಿಕೊಳ್ಳಲಾಗಿದೆ. ಹೀಗಿದ್ದರೂ ಸಹ ಖರೀದಿ ಕೇಂದ್ರ ತೆರೆದು ಅರಿಶಿಣ ತೆಗೆದುಕೊಳ್ಳಲು ಅಧಿಕಾರಿಗಳು ವಿಳಂಭಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಖರೀದಿ ಕೇಂದ್ರ ತೆರೆಯದಿದ್ದರೆ ಅಮರಣಾಂತ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಕಚೇರಿಯಲ್ಲಿ ತಹಸೀಲ್ದಾರ್ ಶ್ರೀಶೈಲತಳವಾರ ಮತ್ತು ಎಪಿಎಂಸಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್(ಕಮರಹಳ್ಳಿರವಿ) ನೇತೃತ್ವದಲ್ಲಿ ಸಭೆ ನಡೆಸಿ ಅರಿಶಿಣ ಖರೀದಿ ಕೇಂದ್ರ ತೆರೆಯುವ ಸಂಬಂಧ ಚರ್ಚಿಸಲಾಯಿತು. ನಂತರ ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ಆಗಮಿಸಿ ಎರಡನೇ ಸುತ್ತಿನ ಸಭೆ ನಡೆಸಿದರು. ಅರಿಶಿಣ ಖರೀದಿ ಕೇಂದ್ರ ತೆರೆಯುವ ಭರವಸೆ ಪ್ರಕಟಿಸಿದ ಹಿನ್ನೆಲೆಯಲ್ಲಿ ರಾಜ್ಯ ಅರಿಶಿಣ ಬೆಳಗಾರರ ಒಕ್ಕೂಟ ಮತ್ತು ರೈತ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ಕೈ ಬಿಟ್ಟರು.
ಈ ಸಂದರ್ಭದಲ್ಲಿ ಅರಿಶಿಣ ಬೆಳೆಗಾರರ ಸಂಘಟನೆ ರಾಜ್ಯ ಸಂಚಾಲಕ ನಾಗಾರ್ಜುನಕುಮಾರ್, ರೈತ ಸಂಘಟನೆ ಮುಖಂಡ ಕುಂದಕೆರೆ ಸಂಪತ್ತು, ದಡದಹಳ್ಳಿ ಮಹೇಶ್ ಸೇರಿದಂತೆ ನೂರಾರು ಮಂದಿ ರೈತರು ಹಾಜರಿದ್ದರು.