ಮೈಸೂರು: ನ್ಯಾಯಮೂರ್ತಿ ಶಾಂತರಾಜು ರವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗಳ ಸಮೀಕ್ಷ ವರದಿಯನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ. ಈ ಸಂಬಂಧ ನಗರದ ಪತ್ರಕರ್ತರ ಭವನದಲ್ಲಿ ಇಂದು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ದಸಂಸ ರಾಜ್ಯ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಹಿಂದಿನಿಂದಲೂ ಕಾಲಕಾಲಕ್ಕೆ ಹಲವಾರು ಆಯೋಗಗಳು ಶೋಷಿತ ಸಮುದಾಯಗಳ, ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಸ್ತುನಿಷ್ಠ ವರದಿಗಳನ್ನು ನೀಡುತ್ತಾ ಬಂದಿವೆ. ಈ ವರದಿಗಳ ಆಧಾರದ ಮೇಲೆ ಸರ್ಕಾರಗಳು ಯೋಜನೆಗಳನ್ನು ರೂಪಿಸಿ ವಂಚಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತಿದೆ.
ಸದರಿ ವರದಿ ಜಾರಿ ಮಾಡಬಾರದೆಂದು ಈ ವರದಿ ಬಹಿರಂಗಗೊಳ್ಳುವ ಮೊದಲೇ ಅನಗತ್ಯ ಆಕ್ಷೇಪಣೆ ಮಾಡುತ್ತಿರುವ ಕೆಲ ಮಠಾಧೀಶರು ಮತ್ತು ರಾಜಕೀಯ ಪಕ್ಷಗಳು ಹಾಗೂ ಸಮಾಜ ವಿರೋಧಿ ಶಕ್ತಿಗಳಿಗೆ ಮಣೆ ಹಾಕದೆ ಸರ್ಕಾರವು ಕಾಂತರಾಜು, ವರದಿಯನ್ನು ಚರ್ಚೆಗೊಳಪಡಿಸಿ ಜಾರಿಗೊಳಿಸಿ ಹಿಂದುಳಿದ ವರ್ಗದಲ್ಲೇ ಅತೀ ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆ ಮತ್ತು ಕಾನೂನುಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು. ಹಾಗೊಂದು ವೇಳೆ ವರದಿ ಜಾರಿಗೊಳಿಸದಿದ್ದರೆ ಅಹಿಂದ ಸಮುದಾಯಗಳನ್ನು ಸಂಘಟಿಸಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯ ಸಣ್ಣಯ್ಯ ಲಕ್ಕೂರು ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪ್ಪ, ಇದ್ದರು.