ಹೈದರಾಬಾದ್ : ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಶುಕ್ರವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಮುಖ ಆರು ಗ್ಯಾರಂಟಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್, ರೈತರ ಬೆಳೆ ಸಾಲ ಮನ್ನಾ, ಕೃಷಿ ಬಳಕೆಗೆ ೨೪ ಗಂಟೆ ಉಚಿತ ವಿದ್ಯುತ್, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹೆಸರಲ್ಲಿ ಬಡ ಯುವತಿಯರ ಮದುವೆಗೆ ಒಂದು ಲಕ್ಷ ರೂ. ಆರ್ಥಿಕ ನೆರವುಹಾಗೂ ೧೦ ಗ್ರಾಂ ಚಿನ್ನ ನೀಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ, ತೆಲಂಗಾಣ ರಾಜ್ಯಕ್ಕಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡರು ಹಾಗೂ ಹೋರಾಟ ಮಾಡಿದರು. ಆದರೆ, ಪ್ರತ್ಯೇಕ ತೆಲಂಗಾಣದ ಲಾಭವನ್ನು ಬಿಆರ್‌ಎಸ್ ನಾಯಕ, ಸಿಎಂ ಕೆ.ಚಂದ್ರಶೇಖರ್ ರಾವ್ ಮಾತ್ರ ಅನುಭವಿಸುತ್ತಿದ್ದಾರೆ ಎಂದರು. ಮುಂದುವರೆದು ಮಾತನಾಡಿದ ಅವರು, ತೆಲಂಗಾಣದ ಜನತೆಗೆ ಕಾಂಗ್ರೆಸ್ ಆರು ಗ್ಯಾರಂಟಿಗಳ ಜೊತೆಗೆ ‘ಅಭಯಹಸ್ತಂ’ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲು ರಾಜ್ಯದ ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಜನತೆ ಬದಲಾವಣೆ ಬಯಸಿದ್ದಾರೆ. ಕರ್ನಾಟಕದಲ್ಲಿ ಐದು ಗ್ಯಾರಂಟಿಗಳಿಗೆ ಅನುಷ್ಠಾನವನ್ನು ಮಾಡಿ ತೋರಿಸಿದ್ದೇವೆ. ತೆಲಂಗಾಣದಲ್ಲೂ ೬ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಮೊದಲ ಸಂಪುಟ ಸಭೆಯಲ್ಲೇ ನಮ್ಮ ಗ್ಯಾರಂಟಿಗಳನ್ನು ಅಂಗೀಕರಿಸಲಾಗುತ್ತದೆ ಎಂದು ಖರ್ಗೆ ತಿಳಿಸಿದರು.
ಅಲ್ಲದೇ, ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಶಿಕ್ಷಕರ ಹುದ್ದೆಗಳನ್ನು ಭರ್ತಿ, ೨ ಲಕ್ಷ ಬೆಳೆ ಸಾಲ ಮನ್ನಾ ಮತ್ತು ವಾರ್ಷಿಕ ೩ ಲಕ್ಷದವರೆಗಿನ ಬಡ್ಡಿ ರಹಿತ ಬೆಳೆ ಸಾಲ, ರಾಜ್ಯ ಬಜೆಟ್‌ನ ಶೇ.೧೫ರಷ್ಟು ಮೀಸಲಿಡುವುದರೊಂದಿಗೆ ಶಿಕ್ಷಣಕ್ಕೆ ಒತ್ತು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್, ಪ್ರತಿ ಆಟೋ ಚಾಲಕರ ಖಾತೆಗೆ ವರ್ಷಕ್ಕೆ ೧೨,೦೦೦ ರೂ. ಜಮೆ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.