ಮೈಸೂರು: ಇಂದು ಪೈ ವಿಸ್ಟಾ ಹೊಟೇಲ್ ನಲ್ಲಿ ಕನ್ನಡ ರಾಜ್ಯೊತ್ಸವವನ್ನು ವಿನೂತನವಾಗಿ ಆಚರಿಸಲಾಯಿತು.ಬೇರೆ ರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ನವೆಂಬರ್ ೧ ರಿಂದ ಕನ್ನಡ ಕಲಿಸಿ ಇಂದು ಅವರೇ ಸೇರಿ ಕಾರ್ಯಕ್ರಮವನ್ನು ಕನ್ನಡದಲ್ಲೇ ನಿರೂಪಣೆ ಮಾಡಿರುವುದು ವಿಶೇಷವಾಗಿತ್ತು.
ಹೊಟೇಲ್ ಕೆಲಸಕ್ಕೆ ನಮ್ಮ ರಾಜ್ಯದವರು ಹೆಚ್ಚಿನ ಆಸಕ್ತಿ ತೋರಿಸದ ಕಾರಣ ಹೊರ ರಾಜ್ಯದವರಿಗೆ ಕರೆಸಬೇಕಾಗುತ್ತದೆ. ಹಾಗೆ ಬಂದವರು ಸಹ ನಮ್ಮ ಕರ್ನಾಟಕದ ಗ್ರಾಹಕರಿಗೆ ಅರ್ಥವಾಗುವ ಹಾಗೆ ಬೇರೆ ರಾಜ್ಯದವರಿಗೆ ನವೆಂಬರ್ ೧ ರಿಂದ ಕನ್ನಡ ಕಲಿಸುತ್ತಾ ಬಂದಿರುವುದು ಸಂತೋಷದ ವಿಷಯ ಮತ್ತು ಇದು ಇತರರಿಗೆ ಆದರ್ಶವೆಂದರೆ ತಪ್ಪಾಗಲಾರದು.
ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀ ಸಿ .ನಾರಾಯಣಗೌಡ ಮಾತನಾಡಿ ಹಿಂದಿನ ಕಾಲದಲ್ಲಿ ಹೊಟೇಲ್ ಕೆಲಸಕ್ಕೆ ಉಡುಪಿ ಹಾಗೂ ಕರ್ನಾಟಕದವರೇ ಜಾಸ್ತಿಯಾಗಿ ಬರುತ್ತಿದ್ದರು, ಆದರೆ ಇತ್ತೀಚಿನ ದಿನದಲ್ಲಿ ಹೊರ ರಾಜ್ಯದವರ ಮೇಲೆ ಅವಲಂಬಿತವಾಗಿರಬೇಕಾದ ಪರಿಸ್ಥಿತಿ ಬಂದಿದೆ. ಹೊರ ರಾಜ್ಯದ ಕಾರ್ಮಿಕರಿಗೆ ಕನ್ನಡ ಕಲಿಸುವುದು ಬಹಳ ಒಳ್ಳೆಯ ಬೆಳವಣಿಗೆ ಹೀಗೆಯೇ ಎಲ್ಲಾ ಹೊರ ರಾಜ್ಯದವರಿಗೆ ಕನ್ನಡ ಕಲಿಸಿದರೆ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಈ ಕಾರ್ಯಕ್ರಮವನ್ನ ಮುಕ್ತ ಕಂಠದಿಂದ ಶ್ಲಾಘಿಸಿದರು.
ಪೈ ವಿಸ್ಟಾ ಹೊಟೇಲ್ ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೆ. ಮಹೇಶ ಕಾಮತ್ ರವರು ಮಾತನಾಡಿ ಮೈಸೂರು ರಾಜ್ಯದಿಂದ ಬೆಂಗಳೂರು ರಾಜ್ಯಮಾಡಿ ೫೦ ವರ್ಷ ತುಂಬಿ ಸರ್ಕಾರವು ಒಂದು ತಿಂಗಳು ರಾಜ್ಯೊತ್ಸವವನ್ನ ವಿಜೃಂಭಣೆಯಿಂದ ಆಚರಿಸೋಣ ಎಂದು ತಿಳಿಸಿದ್ದು ನಮಗೆ ಈ ಕಾರ್ಯಕ್ರಮ ಆಯೋಜಿಸಲು ಪ್ರೇರಣೆಯಾಗಿದೆ. ಮುಂದಿನ ದಿನ ಎಲ್ಲಾ ಕಾರ್ಮಿಕರಿಗೆ ಕನ್ನಡ ಮಾತನಾಡಲು ಹಾಗೂ ಬರೆಯಲು ಪ್ರಾರಂಭಿಸುತ್ತೇವೆ. ಈ ರೀತಿಯಲ್ಲಿ ನಾವು ಕನ್ನಡವನ್ನ ಬೆಳೆಸಬೇಕು ಎಂದು ತಿಳಿಸಿದರು. ಬೇರೆ ರಾಜ್ಯದ ಎಲ್ಲಾ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.