ಮಂಗಳೂರು: ೨೦೨೩ನೇ ಸಾಲಿನ ಕೆ.ಇ.ಎ ಸ್ಪರ್ಧಾತ್ಮಕ ಪರೀಕ್ಷೆ ನವೆಂಬರ್ ೧೮ ಮತ್ತು ೧೯ ರಂದು ಮಂಗಳೂರು ತಾಲೂಕಿನ ಒಟ್ಟು ೪ ಪರೀಕ್ಷೆ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು, ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಪರೀಕ್ಷೆಗಳನ್ನು ಶಾಂತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜ್ಯಾರಿಗೊಳಿಸಿ ಮಂಗಳೂರು ನಗರದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳೂ ಆಗಿರುವ ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ್ ಗೋಯಲ್ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆ ನಡೆಯುವ ದಿನದಂದು ನಗರದ ಕಾರ್ ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ ಸ್ಟ್ರೀಟ್ ಮಹಿಳಾ ಪದವಿಪೂರ್ವ ಕಾಲೇಜು, ಕುದ್ರೊಳಿ ನಾರಾಯಣ ಗುರು ಕಾಲೇಜು, ಕೊಡಿಯಲ್ ಬೈಲ್ ಸೆಂಟ್ ಆಲೋಶಿಯಸ್ ಪಿಯು ಕಾಲೇಜು ಹಾಗೂ ಬಲ್ಮಠ ಮಹಿಳಾ ಪದವಿಪೂರ್ವ ಕಾಲೇಜಿನ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ