
ಕೊಳ್ಳೇಗಾಲ: ಪಟ್ಟಣ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಈ ರ್ಯಾಲಿ ಯನ್ನು ಡಿವೈಎಸ್ಪಿ ಸೋಮೇಗೌಡ ಹಸಿರು ನಿಶಾನೆ ತೋರಿಸಿ, ಬೈಕ್ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಅರಿವು ಮೂಡಿಸುವ ಉದ್ದೇಶದಿಂದಾಗಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಪೊಲೀಸರು ಜಾರಿಗೆ ತಂದಿರುವ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು.ರಸ್ತೆ ಅಪಘಾತಗಳನ್ನು ತಪ್ಪಿಸಲು ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಳಿಕ ಪಟ್ಟಣ ಪೊಲೀಸ್ ಠಾಣೆಯ ಮುಂಭಾಗದಿಂದ ಹೊರಟು ಅಂಬೇಡ್ಕರ್ ವೃತ್ತ, ಎಡಿಬಿ ವೃತ್ತ, ಐಬಿ ರಸ್ತೆ, ತಾ.ಪಂ ವೃತ್ತ, ಎಂ.ಜಿ.ಎಸ್.ವಿ ರಸ್ತೆ, ಗುರುಕಾರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಡಾ.ವಿಷ್ಣು ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ತೆರಳಿ ಠಾಣೆಗೆ ತಲುಪಿದರು.
ಇದೇ ವೇಳೆ ಪೊಲೀಸ್ ಅಧಿಕಾರಿಗಳು ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಿದ್ದ ಸಾರ್ವಜನಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಶುಭ ಕೋರಿದರು.
ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣಪ್ಪ, ಟೌನ್ ಉಪ ನಿರೀಕ್ಷಕ ಮಹೇಶ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು, ಸಾರ್ವಜನಿಕರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.