ಯಳಂದೂರು : ತಾಲೂಕಿನ ಯರಿಯೂರು ಗ್ರಾಮದ ದೇವಸ್ಥಾನದಲ್ಲಿ ಇಟ್ಟಿದ್ದ ಹುಂಡಿಯನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಅಂಬೇಡ್ಕರ್ ಸಮುದಾಯಭವನದ ಮುಂಭಾಗದಲ್ಲಿರುವ ಒಳಗೆರೆ ಮಾರಮ್ಮದೇವಿ ದೇವಸ್ಥಾನದ ಕಬ್ಬಿಣದ ಬಾಗಿಲು ಒಡೆದು ಇಲ್ಲಿದ್ದ ಹುಂಡಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ.
ನಂತರ ಗ್ರಾಮದ ಹೊರ ಭಾಗದಲ್ಲಿರುವ ಕಬಿನಿ ನಾಲೆಯ ಬಳಿ ಹುಂಡಿಗೆ ಹಾಕಲಾಗಿದ್ದ ಬೀಗವನ್ನು ಒಡೆದು ಇದರಲ್ಲಿದ್ದ ಹಣವನ್ನು ಕದ್ದು ಹುಂಡಿಯನ್ನು ಇಲ್ಲೇ ಬೀಸಾಡಿ ಹೊರಟಿದ್ದಾರೆ. ಇದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಎಣಿಕೆ ಮಾಡಲಾಗುತ್ತಿತ್ತು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಪೂಜೆ ಸಲ್ಲಿಸಲಾಗುತ್ತಿತ್ತು. ದೇಗುಲದ ಬಾಗಿಲು ಒಡೆದಿರುವುದನ್ನು ಭಾನುವಾರ ಬೆಳಿಗ್ಗೆ ಕಂಡ ಇಲ್ಲಿನ ಅರ್ಚಕ ಮಂಜುನಾಥ್ ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ.