ಕೆ.ಆರ್.ಪೇಟೆ: ಹತ್ತಾರು ಸೌಲಭ್ಯಗಳನ್ನು ಶಾಲಾ ಮಕ್ಕಳಿಗೆ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಬೇಕು ಎಂದು ಶಿಕ್ಷಣ ಸಂಯೋಜಕ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ದಾಖಲಾತಿ ಹೆಚ್ಚಳ ಮಾಡಲು ಪೋಷಕರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕಲಿತ ಲಕ್ಷಾಂತರ ಮಂದಿ ಇಂದು ತಮ್ಮ ಬದುಕನ್ನು ವಿವಿಧ ಕ್ಷೇತ್ರಗಳಲ್ಲಿ ರೂಪಿಸಿಕೊಂಡಿದ್ದಾರೆ. ಆದರೆ ಇಂದು ಪೋಷಕರು ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಮಾದ್ಯಮ ಹಾಗೂ ಗ್ರಾಮೀಣ ಕೋಟಾ ಸೇರಿದಂತೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ, ಬಿಸಿಯೂಟ ಮುಂತಾದುವುಗಳನ್ನು ನೀಡಿ ಗುಣಮಟ್ಟದ ಕಲಿಕೆಯನ್ನು ಒದಗಿಸುತ್ತಿರುವ ಸರ್ಕಾರಿ ಶಾಲೆಗಳೀಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ ಕಾಣುತ್ತಿದೆ. ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರತಿಭಾನ್ವಿತರಾಗಿ ಆಯ್ಕೆಯಾಗಿ ಬಂದಿರುವ ಶಿಕ್ಷಕರಾಗಿದ್ದು ಉತ್ತಮ ಫಲಿತಾಂಶ ನೀಡಬಲ್ಲವರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಬಿ.ಎಸ್.ಮಹೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಧಮ್ಮ, ಗ್ರಾಮದ ಮುಖಂಡರಾದ ಶಿವಲಿಂಗೇಗೌಡ, ಸುಬ್ಬೇಗೌಡ, ಬೆಟ್ಟಯ್ಯ, ನಿಂಗೇಗೌಡ ಸೇರಿದಂತೆ ಶಾಲಾ ಶಿಕ್ಷಕರು ಗ್ರಾಮದ ಪೋಷಕರು ಹಾಜರಿದ್ದರು.