ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಬೈಲುಕುಪ್ಪೆ ಗ್ರಾಮದ ಗಡಿ ಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ.೭೬ ಮತ್ತು ೩೧ ರಲ್ಲಿನ ೨೩೮ ಎಕರೆ ಅರಣ್ಯ ಪ್ರದೇಶದಲ್ಲಿ ೩ ಎಕರೆ ಜಮೀನು ಸ್ಥಳೀಯ ಶಾಸಕ ಹಾಗೂ ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಕುಮ್ಮಕ್ಕಿನಿಂದ ವಸತಿ ಪ್ರದೇಶವನ್ನಾಗಿ ಪರಿವರ್ತಿಸಲು ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆಂದು ಸಾಮಾಜಿಕ ಹೋರಾಟಗಾರ ಎನ್.ಪಿ.ಅಮೃತೇಶ್ ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವುದಾಗಿ ಅರಣ್ಯ ಸಚಿವರು ಪದೇ ಪದೇ ಹೇಳಿಕೆ ನೀಡುತ್ತಿದ್ದು, ಈ ಬಗ್ಗೆ ಒತ್ತುವರಿ ವರದಿ ಕೈ ಸೇರಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಜತೆಗೆ ಪಿರಿಯಾಪಟ್ಟಣ ತಾಲ್ಲೂಕು ಬೈಲುಕುಪ್ಪೆ ಗಡಿ ಭಾಗದಲ್ಲಿ ಆಶ್ರಯ ಯೋಜನೆಗಾಗಿ ೩ ಎಕರೆ ಜಮೀನು ಒತ್ತುವರಿ ಮಾಡಲಾಗಿದೆ. ಈ ಅರಣ್ಯ ಭೂಮಿಯಲ್ಲಿದ್ದ ಮರಗಳನ್ನು ಕಡಿದು ಭಾರಿ ಯಂತ್ರಗಳನ್ನು ಬಳಸಿ ಭೂಮಿ ಸಮತಟ್ಟು ಮಾಡಲಾಗುತ್ತಿದೆ.
ಈ ಬಗ್ಗೆ ಸರ್ಕಾರಿ ಆದೇಶ ನೀಡುವಂತೆ ಸ್ಥಳೀಯರು ಅಧಿಕಾರಿಗಳನ್ನು ಕೇಳಿದಾಗ ಸಚಿವರ ಮೌಖಿಕ ಆದೇಶ ಇದೆ ಎಂದು ಹೇಳಿದ್ದು, ಅಧಿಕಾರಿಗಳ ಬೇಜವಬ್ದಾರಿ ಹೇಳಿಕೆಯಾಗಿದ್ದು, ಸಾರ್ವಜನಿಕರು ಪ್ರತಿಭಟನೆ ನಡೆಸಿದ ಪರಿಣಾಮ ಕಾಮಗಾರಿ ಸ್ಥಗಿತವಾಗಿದೆ. ಅರಣ್ಯ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ವಾಯ್ಸ್ ಆಫ್ ಪಬ್ಲಿಕ್ ಸಂಘಟನೆಯ ಸಂಚಾಲಕಿ ದೀಕ್ಷಾ ಅಮೃತೇಶ್, ವಕೀಲ ಸಾ.ತಿ.ಸದಾನಂದಗೌಡ ಇದ್ದರು.